ಜಿಲ್ಲೆ

ತ್ಯಾಜ್ಯದ ಗೊಬ್ಬರ ಸಿದ್ಧ

Dakshina Kannada

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಹಸಿಕಸ ನಿರ್ವಹಣೆ ಉದ್ದೇಶದಿಂದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪುರಸಭೆ ಕಚೇರಿ ಹಿಂಭಾಗದಲ್ಲಿ ಪೌರಕಾರ್ಮಿಕರ ಸಹಕಾರದೊಂದಿಗೆ ಆರಂಭಿಸಿದ ಸಾವಯವ ಗೊಬ್ಬರ ತಯಾರಿಗೆ ಯಶ ಸಿಕ್ಕಿದೆ. ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ತ್ಯಾಜ್ಯದ ಗೊಬ್ಬರ ಈಗ ಮಾರಾಟಕ್ಕೆ ಸಿದ್ಧಗೊಂಡಿದೆ.

ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ಕಸವನ್ನು ತನ್ನ ತ್ಯಾಜ್ಯ ಸಂಸ್ಕಾರಣಾ ಘಟಕದಲ್ಲಿ ಹಸಿ ಹಾಗೂ ಒಣ ಕಸವನ್ನಾಗಿ ಮಾರ್ಪಾಡು ಮಾಡಲಾಗುತ್ತದೆ. ಬಳಿಕ ಹಸಿ ಕಸದಿಂದ ಗೊಬ್ಬರ ತಯಾರಿಸುವ ಕಾರ್ಯ ಮಾಡುತ್ತಿದೆ. ಪ್ರಾರಂಭದಲ್ಲಿ ಪುರಸಭಾ ಕಚೇರಿಯ ಹಿಂಭಾಗದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ ಸಂಸ್ಕರಣಾ ಘಟಕದಲ್ಲಿ ಗೊಬ್ಬರ ತಯಾರಿಕೆ ನಡೆಯುತ್ತಿದೆ.

ಪುರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ 7ರಿಂದ 8 ಟನ್ ಕಸ ಸಂಗ್ರಹವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಭಾಗದಲ್ಲೂ ಕಸ ಸಂಗ್ರಹ ಆರಂಭಗೊಂಡಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಸಂಗ್ರಹವಾಗುವ ಸಾಧ್ಯತೆ ಇದೆ. ಕಳೆದ ಹಲವು ಸಮಯಗಳಿಂದ ಪ್ರಾಯೋಗಿಕ ನೆಲೆಯಲ್ಲಿ ಗೊಬ್ಬರ ತಯಾರಿ ಮಾಡುತ್ತಿತ್ತು. ಹಲವು ತಿಂಗಳ ಹಿಂದೆ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮಾರ್ಗದರ್ಶನದಲ್ಲಿ ಕಚೇರಿಯ ಹಿಂಭಾಗದಲ್ಲಿ ಹಸಿವನ್ನು ಗೊಬ್ಬವನ್ನಾಗಿ ಪರಿವರ್ತಿಸಲಾಗುತ್ತಿತ್ತು.

ಕೆ.ಜಿ.ಗೆ 5 ರೂಪಾಯಿ: ಈಗ ಘಟಕದಲ್ಲಿ ಸುಮಾರು 15 ಟನ್ ಗೊಬ್ಬರ ಸಂಗ್ರಹವಿದೆ. ಗೊಬ್ಬರದ ಮೌಲ್ಯ ನಿಗದಿ ಹಾಗೂ ಮಾರಾಟಕ್ಕೆ ಸಂಬಂಧಿಸಿ ಈಗಾಗಲೇ ಪುರಸಭಾ ಆಡಳಿತ ಮಂಡಳಿ ಚರ್ಚೆ ನಡೆಸಿ ಪ್ರತಿ ಕೆ.ಜಿ ಗೊಬ್ಬರಕ್ಕೆ 5 ರೂ.ಗಳಂತೆ ದರ ನಿಗದಿ ಮಾಡಿದೆ. ಗೊಬ್ಬರವನ್ನು ಬ್ಯಾಗ್‌ಗಳಾಗಿ ಮಾರಾಟ ಮಾಡಬೇಕೇ ಅಥವಾ ಒಟ್ಟು ರಾಶಿಯನ್ನೇ ಗೊಬ್ಬರ ವರ್ತಕರಿಗೆ ನೀಡಬೇಕೇ ಎನ್ನುವುದರ ಕುರಿತು ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.

45 ದಿನದಲ್ಲಿ ಗೊಬ್ಬರ: ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ಹಸಿ ಕಸವು ಗೊಬ್ಬರವಾಗಿ ಪರಿವರ್ತನೆಗೊಳ್ಳಬೇಕಾದರೆ ಸುಮಾರು 45 ದಿನಗಳು ಬೇಕು. ಪ್ರಾರಂಭದಲ್ಲಿ ವಿಂಗಡನೆಗೊಂಡ ಹಸಿ ಕಸಕ್ಕೆ ಬಯೋ ಕೆಮಿಕಲ್‌ಗಳನ್ನು ಹಾಕಿ ಅದನ್ನು ಸಂಬಂಧಪಟ್ಟ ಶೆಡ್‌ನಲ್ಲಿಡಲಾಗುತ್ತದೆ. 45 ದಿನಗಳ ಬಳಿಕ ಅದು ಗೊಬ್ಬರವಾಗಿ ಪರಿವರ್ತನೆಗೊಳ್ಳಲಿದ್ದು, ಯಂತ್ರದ ಮೂಲಕ ಪುಡಿ ಮಾಡಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ ಪುರಸಭೆಯ ಘಟಕದಲ್ಲಿ ಹಸಿ ಕಸವು ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತಿದೆಯಾದರೂ ಅದಕ್ಕೆ ಸಂಬಂಧಿಸಿದ ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಾಗಿ ಅವುಗಳಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 65 ಲಕ್ಷ ರೂ. ಅನುದಾನ ಮೀಸಲಿಟ್ಟು ಯೋಜನೆ ಹಾಕಿಕೊಳ್ಳಲಾಗಿದೆ.

ಪುಡಿ ಮಾಡಲು ಮಷಿನ್ ಅಗತ್ಯ: ಮುಖ್ಯವಾಗಿ ಸಿದ್ಧಗೊಂಡ ಗೊಬ್ಬರವನ್ನು ಪುಡಿ ಮಾಡುವುದಕ್ಕೆ ಮಷಿನ್ ಅಗತ್ಯವಿದೆ. ಇದಕ್ಕಾಗಿ ಸುಮಾರು 13 ಲಕ್ಷ ರೂ. ಮೀಸಲಿಡಲಾಗಿದೆ. ಜತೆಗೆ ಶೆಡ್‌ವೊಂದನ್ನು ನಿರ್ಮಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಲ್ಲಿ ಗೊಬ್ಬರದ ರೂಪದಲ್ಲಿ ಪುರಸಭೆಗೆ ಒಂದಷ್ಟು ಆದಾಯ ಸಿಗಲಿದೆ.

ಈಗಾಗಲೇ ಸುಮಾರು 15 ಟನ್ ಗೊಬ್ಬರ ನಮ್ಮಲ್ಲಿ ಸಂಗ್ರಹವಿದ್ದು, ಕೆ.ಜಿಗೆ 5 ರೂ.ಗಳಂತೆ ಮಾರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಿತ್ಯ 7ರಿಂದ 8 ಟನ್ ಕಸ ಸಂಗ್ರಹವಾಗುತ್ತಿದ್ದು, ಹಸಿ ಕಸದ ಪ್ರಮಾಣದಷ್ಟೇ ಗೊಬ್ಬರ ಸಂಗ್ರಹವಾಗಲಿದೆ. ಗೊಬ್ಬರ ತಯಾರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು 65 ಲಕ್ಷ ರೂ.ಗಳ ಯೋಜನೆ ಹಾಕಿಕೊಳ್ಳಲಾಗಿದೆ. ಜಯಶಂಕರ್, ಆರೋಗ್ಯ ನಿರೀಕ್ಷಕರು ಬಂಟ್ವಾಳ ಪುರಸಭೆ