ಜಿಲ್ಲೆ

ಫಲವತ್ತಾದ ಕೆರೆ ಮಣ್ಣು ಲೂಟಿ

ಕೋಲಾರ ಡೆಸ್ಕ್

ನರಸಾಪುರ: ನರಸಾಪುರ ಹೋಬಳಿ ರಾಮಸಂದ್ರ ಗ್ರಾಮದ ಕೆರೆಯಲ್ಲಿ 10 ಸಾವಿರ ಮೆಟ್ರಿಕ್​ ಟನ್​ ಮಣ್ಣನ್ನು 7.10 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಇಷ್ಟೊಂದು ಪ್ರಮಾಣದ ಮಣ್ಣನ್ನು ಕಡಿಮೆ ಬೆಲೆಗೆ ಕೊಟ್ಟಿರುವುದು ಮತ್ತು ಮಣ್ಣು ತೆಗೆಯುವಾಗ ಪಾಲಿಸಬೇಕಾದ ನಿಯಮ ಗಾಳಿಗೆ ತೂರಿರುವುದು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿದೆ.

5 ಲಕ್ಷ ರೂ. ರಾಜಧನ, 50 ಸಾವಿರ ಡಿಎಂಎಫ್​, 1.50 ಲಕ್ಷ ಹೆಚ್ಚುವರಿ ವೇತನ, ನೋಂದಣಿ ಶುಲ್ಕ 10 ಸಾವಿರ ಸೇರಿ 7.10 ಲಕ್ಷ ರೂ.ಗಳನ್ನು ಖಾಸಗಿ ಕಂಪನಿಯಿಂದ ಪಾವತಿಸಿಕೊಂಡು ಮೂರು ತಿಂಗಳ ಅವಧಿಯಲ್ಲಿ ಮಣ್ಣು ಸಾಗಣೆಗೆ ಅವಕಾಶ ನೀಡಲಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ ಬಳಿಕ ಗ್ರಾಪಂ ಮತ್ತು ಇಲಾಖೆ ಅಧಿಕಾರಿಗಳು ಹಣ ಪಡೆದು ನಿಯಮ ಪಾಲನೆಯತ್ತ ಗಮನಹರಿಸದಿರುವುದು ಜನರನ್ನು ಕೆರಳಿಸಿದೆ.

ನೀತಿ ನಿಂಬಂಧನೆ ಗೌಣ: ಫೆ.12ರಿಂದ ಮೇ 11ರ ವರೆಗೂ ಮಣ್ಣು ಸಾಗಣೆ ಮಾಡಲು ಖಾಸಗಿ ಕಂಪನಿಗೆ ಅನುಮತಿ ನೀಡಿರುವುದು ಕಾನೂನು ಬಾಹಿರ. ಮಣ್ಣು ತೆಗೆಯುವ ಜೆಸಿಬಿ, ಸಾಗಾಟ ಮಾಡುವ ಲಾರಿ ನೋಂದಣಿ ಮಾಡಿಲ್ಲ. ಮಣ್ಣು ಸಾಗಾಟಕ್ಕೆ ಸಮಯ ನಿಗದಿಪಡಿಲ್ಲ, ಎಷ್ಟು ಮಣ್ಣು ತೆಗೆದಿದ್ದಾರೆ ಎಂಬ ಲೆಕ್ಕವೂ ಇಟ್ಟಿಲ್ಲ. ನಿತ್ಯ ಹಗಲು&ರಾತ್ರಿ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಪಂಚಾಯಿತಿಯೇ ಗ್ರಾಮದ ಕೆರೆಯನ್ನು ನಾಶಗೊಳಿಸಲು ಮುಂದಾಗಿದೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಆರೋಪಿಸಿದ್ದಾರೆ.

ತಪ್ಪಿಸಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಮೇಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತೂಕವನ್ನೇ ಮಾಡಿಲ್ಲ

ಹತ್ತು ಸಾವಿರ ಮೆಟ್ರಿಕ್​ ಟನ್​ ಮಣ್ಣು ಸಾಗಾಟ ಮಾಡಲು ಅನುಮತಿಸಲಾಗಿದೆ ಎನ್ನಲಾದರೂ ಈವರೆಗೆ ತೂಕವನ್ನೇ ಹಾಕಿಲ್ಲ. ಹಣ ಕಟ್ಟಿಸಿಕೊಂಡು ಅನುಮತಿ ನೀಡಿದ್ದಾರೆಯೇ ಹೊರತು, ನಿರ್ವಹಣೆಯನ್ನು ಅಧಿಕಾರಿಗಳು ಸಂಪೂರ್ಣ ರ್ನಿಲಕ್ಷ$್ಯವಹಿಸಿದ್ದಾರೆ. ದಿನಕ್ಕೆ ಎಷ್ಟು ಟ್ರಿಪ್​ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂಬುದು ಲೆಕ್ಕಕ್ಕೆ ಇಲ್ಲದಂತಾಗಿದೆ.

ಕೆರೆ ಮಣ್ಣು ತೆಗೆಯಲು ಬೆಳ್ಳೂರು ಗ್ರಾಪಂ ಅಧಿಕಾರಿಗಳು ಅನುಮತಿ ನೀಡಿದ್ದಾರೆ, ರಾಜಧನ ನಿಗದಿಗಾಗಿ ನಮ್ಮ ಇಲಾಖೆ ಅಧಿಕಾರಿಗಳಿಗೆ ಪತ್ರ ರವಾನೆ ಮಾಡಲಾಗಿದ್ದು, ರಾಜಧನದ ಮೊತ್ತವನ್ನು ನಿಗದಿಪಡಿಸಲಾಗಿದೆ. ಆದರೆ ಕಚೇರಿಯಿಂದ ಗಣಿಗಾರಿಕೆ ಹಾಗೂ ಸಾಗಣೆಗೆ ಯಾವುದೇ ಅನುಮತಿ ನೀಡಲಾಗುವುದಿಲ್ಲ ಎಂದು ಹಲವು ಷರತ್ತುಗಳನ್ನು ಹಾಕಿ ಪತ್ರ ರವಾನೆ ಮಾಡಲಾಗಿದೆ.

- ವಿಶ್ವನಾಥ್​, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಕೋಲಾರ

ಊರಿನಲ್ಲಿ ಕೆಲವರು ದೇವಸ್ಥಾನ ಅಭಿವೃದ್ಧಿಗಾಗಿ ಮಾತನಾಡಿಕೊಂಡು ಕೆರೆ ಮಣ್ಣು ತೆಗೆಯಲು ಅನುಮತಿ ಕೊಟ್ಟಿದ್ದಾರೆ. ಜತೆಗೆ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅನುಮತಿ ನೀಡಿರುತ್ತಾರೆ.

- ಸಂಪರಾಜ್​, ಬೆಳ್ಳೂರು ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ