ಜಿಲ್ಲೆ

ಸ್ತ್ರೀವಾದ ಎಂಬುದು ಒಂದು ಜೀವನ ಕ್ರಮ

ಮೈಸೂರು: ಸ್ತ್ರೀವಾದ ಎಂಬುದು ಒಂದು ಜೀವನ ಕ್ರಮ. ಅದು ಆಯಾ ಕಾಲಘಟ್ಟಕ್ಕೆ ಬದಲಾವಣೆ ಆಗುತ್ತದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಎಚ್.ಎಂ.ಕಲಾಶ್ರೀ ಅಭಿಪ್ರಾಯಿಸಿದರು.


ಕನ್ನಡ ಲೇಖಕಿಯರ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸಾಹಿತ್ಯ ಭವನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮಹಿಳಾ ದಿನಾಚರಣೆ, ಚ.ಸರ್ವಮಂಗಳಾ ಅವರ ‘ಅಮ್ಮನಗುಡ್ಡ-ಅಂತರಾಳ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶಿಕ್ಷಣ, ನಗರೀಕರಣದಿಂದಾಗಿ ಸ್ತ್ರೀವಾದ ಜೀವನ ಕ್ರಮದಲ್ಲಿ ಹಂತ ಹಂತವಾಗಿ ಪರಿವರ್ತನೆಯಾಗುತ್ತಿದೆ. ಶಿಕ್ಷಣದಿಂದಾಗಿ ಸ್ವಾಭಿಮಾನ, ಸ್ವಾವಲಂಬನೆಯ ಜೀವನ ಕ್ರಮಕ್ಕೆ ಮಹಿಳೆಯರು ತೆರೆದುಕೊಳ್ಳುತ್ತಿದ್ದಾರೆ ಎಂದರು.


ಮಹಿಳಾ ತಲ್ಲಣಗಳು ವಿಶ್ವ ವ್ಯಾಪ್ತಿ. ಎಲ್ಲೆಡೆಯೂ ಮಹಿಳಾ ಸಮಸ್ಯೆಗಳು ಜೀವಂತವಾಗಿವೆ. ಆಯಾ ಪ್ರದೇಶ, ದೇಶಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ವ್ಯತ್ಯಾಸವಿದೆಯಷ್ಟೇ ಎಂದರು.


ವಚನಗಾರ್ತಿಯರು ಮೊದಲ ಸ್ತ್ರೀವಾದಿಗಳು. ಇವರೇ ಸಮಸಮಾಜದ ಕನಸು ಕಂಡವರು. ಅದಕ್ಕಾಗಿ ಹೋರಾಡಿದವರೂ ಸಹ. ವಚನಗಾರ್ತಿಯರ ವಿಚಾರ ಲಹರಿಯ ಬುನಾದಿ ಮೇಲೆ ವಿದೇಶಿಯರು ಸ್ತ್ರೀವಾದಕ್ಕೆ ರೂಪಕೊಟ್ಟು ಬೆಳೆಸಿದ್ದಾರೆ ಎಂದರು.


ಸ್ತ್ರೀವಾದದ ಕುರಿತು ಮಹಿಳೆಯರಿಗೇ ಅರಿವು ಇಲ್ಲ. ನಮ್ಮ ವಿರುದ್ಧ ಏನು ಆಗುತ್ತಿದೆ ಎಂಬುದೂ ಅವರಿಗೆ ಗೊತ್ತಾಗುತ್ತಿಲ್ಲ. ಬದುಕಿನ ಬವಣೆ ದಾರಿಯಲ್ಲೇ ನಮಗೆ ನಾವೇ ದಾರಿದೀಪವಾಗಬೇಕು. ನಮ್ಮನ್ನು ನಾವು ಸಂರಕ್ಷಣೆ ಮಾಡಿಕೊಳ್ಳಬೇಕು. ಆ ತಾಕತ್ತು ನಮ್ಮಲ್ಲೇ ಇದೆ ಎಂದರು.


ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿಂದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈಗಲೂ ಗಂಡ, ಸಹೋದರ, ಪುತ್ರರ ಮಾತುಗಳನ್ನು ಮಹಿಳೆಯರು ಕೇಳುವಂತಾಗಿದೆ. ಪುರುಷರಿಗೆ ನಾವು ಹೊಂದಿಕೊಂಡು ಹೋಗುವಂತಾಗಿದೆ. ಇದುವೇ ಮಹಿಳೆಯರ ದೊಡ್ಡ ಮಿತಿ. ಸ್ತ್ರೀವಾದ ಬರೀ ಮಹಿಳೆಯರಿಗೆ ಅಷ್ಟೇ ಅಲ್ಲ, ಅದು ಪುರುಷರ ಸಮಗ್ರ ತಿಳಿವಳಿಕೆ ಬೆಳವಣಿಗೆಯೂ ಆಗಬೇಕು ಎಂದರು.


ನಿವೃತ್ತ ಪ್ರಾಧ್ಯಾಪಕ ಪ್ರೊ.ಬಸವರಾಜ ಕಲ್ಗುಡಿ ಕೃತಿಯನ್ನು ಬಿಡುಗಡೆಗೊಳಿಸಿದರು. ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎಸ್.ಡಿ.ಶಶಿಕಲಾ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕೃತಿಗಾರ್ತಿ, ನಿವೃತ್ತ ಪ್ರಾಂಶುಪಾಲೆ ಪ್ರೊ.ಚ.ಸರ್ವಮಂಗಳಾ, ಟ್ರಸ್ಟ್‌ನ ಅಧ್ಯಕ್ಷೆ ಪ್ರೊ. ಪದ್ಮಾಶೇಖರ್ ಇನ್ನಿತರರಿದ್ದರು