ಬೆಂಗಳೂರು: ಸಾರ್ವಜನಿಕರು ರಸ್ತೆ ನಿಯಮ ಪಾಲಿಸುವಂತೆ ಮಾಡಲು ಇತ್ತೀಚೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಉಪಾಯವೊಂದನ್ನು ಮಾಡಿದ್ದರು. ನಗರದ ಪ್ರಮುಖ ಸಿಗ್ನಲ್ಗಳಲ್ಲಿ ಟ್ರಾಫಿಕ್ ಪೊಲೀಸ್ ಗೊಂಬೆಗಳನ್ನು ನಿಲ್ಲಿಸಿ ತಮ್ಮ ಉಪಸ್ಥಿತಿ ಇರುವಂತೆ ಮಾಡಿದ್ದರು. ಇದೀಗ ಬೆಂಗಳೂರು ಪೊಲೀಸ್ ಮತ್ತೊಂದು ಉಪಾಯ ಮಾಡಿದ್ದು ನಗರದಲ್ಲಿ ಮಹಿಳಾ ಪೊಲೀಸರ ಗೊಂಬೆಗಳನ್ನು ಇಟ್ಟು ಜನರಲ್ಲಿ ಭಯವಿರುವಂತೆ ಮಾಡಲು ಹೊರಟಿದ್ದಾರೆ.
ಬೆಂಗಳೂರಿನಲ್ಲಿ ಮಹಿಳಾ ಪೊಲೀಸ್ ಗೊಂಬೆಗಳನ್ನು ಇರಿಸುವಂತೆ ಬೆಂಗಳೂರು ಪೊಲೀಸರ ಮುಖ್ಯಸ್ಥ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಜನರು ಪೊಲೀಸರು ಕಣ್ಣೆದುರಿದ್ದರೆ ಮಾತ್ರ ತಪ್ಪು ಮಾಡುವುದಕ್ಕೆ ಭಯ ಪಡುತ್ತಾರೆ, ಆಗ ಮಾತ್ರ ಕಾನೂನು ಪಾಲನೆ ಮಾಡುತ್ತಾರೆ ಎನ್ನುವ ಕಾರಣದಿಂದ ಮಹಿಳಾ ಪೊಲೀಸ್ ಗೊಂಬೆಗಳನ್ನಿಡುವ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯುವಂತೆ ಈ ಪೊಲೀಸ್ ಗೊಂಬೆಗಳನ್ನು ನಿರ್ಮಿಸಲಾಗುವುದು. ಯಾವ ಪ್ರದೇಶದಲ್ಲಿ ಗೊಂಬೆಗಳನ್ನಿಡಬೇಕು, ಯಾವ ರೀತಿಯಲ್ಲಿ ನಿಯೋಜನೆ ಮಾಡಬೇಕು ಎನ್ನುವ ಕೆಲಸವನ್ನು ನಗರದ ಪೊಲೀಸ್ ಉಪ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರಿಗೆ ವಹಿಸಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಎಷ್ಟು ಪೊಲೀಸ್ ಗೊಂಬೆಗಳ ನಿಯೋಜನೆ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗಿಲ್ಲ. ಯಾವ ಯಾವ ಸ್ಥಳದಲ್ಲಿ ಅವಶ್ಯಕತೆ ಇನ್ನುವುದನ್ನು ಗುರುತಿಸಿ ಅದರ ಸಂಖ್ಯೆಯನ್ನು ತಿಳಿಸುವಂತೆ ಕಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈಗಾಗಲೇ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಒಂದು ಮಹಿಳಾ ಪೊಲೀಸ್ ಗೊಂಬೆಯನ್ನು ಇರಿಸಲಾಗಿದೆ. (ಏಜೆನ್ಸೀಸ್)