ಹಾವೇರಿ: ಹಣ್ಣುಗಳ ರಾಜ ಎಂದೇ ಕರೆಯುವ ಮಾವಿಗೆ ಹೆಣ್ಣು ನೊಣದ ಕಾಟ ಶುರುವಾಗಿದೆ. ನೊಣ ಬಾಧೆಯಿಂದ ಶೇ. 25.31 ಇಳುವರಿ ನಷ್ಟವಾಗಲಿದೆ ಎಂದು ದೇವಿಹೊಸೂರು ತೋಟಗಾರಿಕೆ ಸಂಶೋಧನಾ ಕೇಂದ್ರದ ಕೀಟಶಾಸ್ತ್ರ ವಿಭಾಗದ ಡಾ. ವಿನಯಕುಮಾರ ಎಂ.ಎಂ., ತಿಳಿಸಿದ್ದಾರೆ.
ಮಾವು ಬೆಳೆಗಾರರು ಹೆಣ್ಣು ನೊಣದ ಬಾಧೆಯ ಜತೆಗೆ ಓಟೆಕೊರಕ ಹಾಗೂ ಕೀಟನಾಶಕ ಅವಶೇಷಗಳ ಕಾರಣದಿಂದಾಗಿ ಕೆಲವು ರಾಷ್ಟ್ರಗಳಿಗೆ ರಫ್ತು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ವಹಿವಾಟಿನಲ್ಲಿ ನಷ್ಟವಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ಸರಿಯಾದ ಬೆಲೆ ಸಿಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಮಾವು ಬೆಳೆಯಲ್ಲಿ ಹೆಣ್ಣು ನೊಣದ ನಿರ್ವಹಣೆ ಬಹಳ ಮುಖ್ಯ. ಹೆಣ್ಣು ನೊಣವು ತರಕಾರಿ ಬೆಳೆಗಳಿಗೂ ಬಾಧೆ ಮಾಡುತ್ತದೆ. ನೇರವಾಗಿ ಹಣ್ಣನ್ನು ತಿಂದು ಹಾನಿ ಮಾಡುವುದಕ್ಕಿಂತ ಪರೋಕ್ಷವಾಗಿ ಹಾನಿಯುಂಟು ಮಾಡುತ್ತವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ವಿನಯಕುಮಾರ ಎಂ.ಎಂ., (9164405294) ಅವರನ್ನು ರೈತರು ಸಂರ್ಪಸಬಹುದು.
ಜೀವನಚಕ್ರ: ಈ ಕೀಟವು ಮಾವು, ಬಾಳೆ, ನಿಂಬೆ, ಟೊಮ್ಯಾಟೊ, ಪೇರಲ, ಸೀತಾಫಲ ಹಾಗೂ ಇನ್ನೂ ಹಲವು ಹಣ್ಣುಗಳ ಬೆಳೆಗಳನ್ನು ಅವಲಂಬಿಸಿದೆ. ಕೀಟವು ಅಂದಾಜು 10ರಿಂದ 13ವಾರಗಳ ಜೀವನಚಕ್ರ ಹೊಂದಿರುತ್ತದೆ. ಪ್ರೌಢ ಹೆಣ್ಣು ಕೀಟವು ಮೊಟ್ಟೆಗಳನ್ನು ಹಣ್ಣಿನ ಸಿಪ್ಪೆಯ ಮೇಲೆ ಸಿಕ್ಕಿಸುತ್ತವೆ. ನಂತರ ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಹಣ್ಣಿನ ತಿರುಳನ್ನು ತಿಂದು ಹಾನಿ ಮಾಡುತ್ತವೆ. ನಂತರ ಬಾಧಿತ ಹಣ್ಣುಗಳು ನೆಲಕ್ಕೆ ಬಿದ್ದು ಮರಿ ಕೀಟಗಳು ಅಲ್ಲೇ ಕೋಶಾವಸ್ಥೆಗೆ (10-15 ದಿನ) ತೆರಳಿ ನಂತರ ಕೋಶದಿಂದ ಹೊರಬರುತ್ತವೆ. ಪ್ರೌಢ ಕೀಟಗಳು ಹೊಸ ಹಣ್ಣುಗಳನ್ನು ಹುಡುಕಿ ಬಾಧೆ ಮಾಡುತ್ತವೆ.
ರೋಗ ಲಕ್ಷಣಗಳು: ಹಣ್ಣುಗಳು ಡ್ವಾರಗಾಯಿ ಅಥವಾ ಮಾಗಿರುವ ಹಂತದಲ್ಲಿರುವಾಗ ಕೀಟ ಬಾಧೆ ಕಂಡುಬರುತ್ತದೆ. ಪ್ರೌಢ ಕೀಟ ಮೊಟ್ಟೆಯನ್ನಿಟ್ಟಾಗ, ಆ ಸ್ಥಳದಲ್ಲಿ ಸೂಕ್ಷ್ಮಾಣು ಜೀವಿಗಳು ಒಳಸೇರಿ ಹಣ್ಣುಗಳನ್ನು ಕೊಳೆಸಲಾರಂಭಿಸುತ್ತದೆ. ನಂತರ ಹಣ್ಣುಗಳು ಕೊಳೆತು ಮರದಿಂದ ಉದುರುವುದನ್ನು ಕಾಣಬಹುದು. ಬಾಧಿತ ಹಣ್ಣಿನಿಂದ ಅಂಟುದ್ರವ ಹೊರಬರುವುದನ್ನು, ಹಣ್ಣುಗಳ ಮೇಲೆ ಕಂದು ಮಚ್ಚೆಗಳನ್ನು, ಹಣ್ಣುಗಳು ವಿರೂಪಗೊಳ್ಳುವುದನ್ನು ಕಾಣಬಹುದು.
ಕೀಟ ನಿರ್ವಹಣೆ ಕ್ರಮ: ಬಾಧೆಗೊಳಪಟ್ಟ ಹಣ್ಣುಗಳನ್ನು 15 ದಿನಗಳಿಗೊಮ್ಮೆ ಆರಿಸಿ ನಾಶಪಡಿಸಬೇಕು. ಮರದ ಬುಡದಲ್ಲಿನ ಮಣ್ಣನ್ನು ಸಡಿಲಗೊಳಿಸಬೇಕು ಅಥವಾ ಬೇಸಿಗೆ ಉಳುಮೆ ಮಾಡಬೇಕು. ಸರಿಯಾದ ಸಮಯಕ್ಕೆ ಹಣ್ಣುಗಳನ್ನು ಕೊಯ್ಲು ಮಾಡಬೇಕು. ಕಡಿಮೆ ಮರಗಳಿದ್ದರೆ ಹಣ್ಣುಗಳಿಗೆ ಪೇಪರ್ ಬ್ಯಾಗ್ ಹಾಕಿ ಬಾಧೆಯಿಂದ ಕಾಪಾಡಬಹುದು. ಕೊಯ್ಲಿನ 15ರಿಂದ 20ದಿನಗಳ ಮುಂಚೆ ಡೆಕಾಮೆಥ್ರಿನ್ 2.8ಇಸಿ. 0.5ಮಿಲೀ + ಅಜಾಡಿರಾಕ್ಟಿನ್ 2ಮಿಲೀ/ಲೀ ಸಿಂಪಡಿಸಬೇಕು. ಬಾಧೆ ತೀವ್ರವಾಗಿದ್ದಾಗ ಅಥವಾ ಹೆಣ್ಣು ನೊಣಗಳು ಹೆಚ್ಚಿದ್ದಾಗ 100ಗ್ರಾಂ ಬೆಲ್ಲ + 2 ಮಿಲೀ. ಡೆಲ್ಟಾಮೆಥ್ರಿನ್ 2.8 ಇಸಿಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ 7ದಿನಗಳಿಗೊಮ್ಮೆ ಕಾಂಡದ ಮೇಲೆ ಸಿಂಪಡಿಸಬೇಕು. ಪ್ರತಿ ಹೆಕ್ಟರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ಹಾಕಬೇಕು. ಈ ಬಲೆಗಳಲ್ಲಿ ಪ್ರತಿ ಲೀ. ನೀರಿನಲ್ಲಿ 1ಮಿಲೀ ಥೈಲ್ಯುುಜಿನಾಲ್ ಮತ್ತು 1ಮಿಲೀ ಡೈಕ್ಲೋರೊವಾಸ್ 76ಇಸಿ ಅಥವಾ 1ಮಿಲೀ ಮಲಾಥಿಯಾನ್ 50ಇಸಿ ಬೆರಸಿದ ದ್ರಾವಣ ಬಳಸಬೇಕು. ಅಥವಾ 1.7ಮಿಲೀ ಡೈಮಿಥೋಯೇಟ್ 30ಇಸಿಯನ್ನು 10ಗ್ರಾಂ ಬೆಲ್ಲದೊಂದಿಗೆ ಕರಗಿಸಿ ಹಣ್ಣು ಮಾಗುವ ಅವಧಿಯಲ್ಲಿ ಸಿಂಪರಣೆ ಮಾಡಬೇಕು.