ಜಿಲ್ಲೆ

ಹೆಣ್ಣು ಕುಟುಂಬದ ಕಣ್ಣು : ಡಿಎಚ್‌ಒ ಡಾ.ಎಚ್.ಎಲ್.ಜನಾರ್ದನ ಹೇಳಿಕೆ

ಬಳ್ಳಾರಿ : ಹೆಣ್ಣು ಕುಟುಂಬದ ಕಣ್ಣು. ಮಹಿಳೆಯು ಆರೋಗ್ಯವಾಗಿದ್ದರೆ ಕುಟುಂಬ ಸಂತೃಪ್ತಿಯಿಂದ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ದನ ಅವರು ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಬಳ್ಳಾರಿ ಸೈಕಲ್ ಕ್ಲಬ್, ಭಾರತೀಯ ವೈದ್ಯಕೀಯ ಸಂಘ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.

ಕುಟುಂಬದ ಸದಸ್ಯರೊಂದಿಗೆ ತಾವು ಸಹ ಸರಿಯಾದ ಸಮಯಕ್ಕೆ ಆಹಾರ ಸೇವಿಸುವ ಮೂಲಕ ಸಮುದಾಯ ಆರೋಗ್ಯದ ರಕ್ಷಣೆಗೆ ಬೆಂಬಲ ನೀಡುವ ಕಾರ್ಯವನ್ನು ಮಾಡಬೇಕಿದೆ ಎಂದರು.

ನಿಯಮಿತವಾಗಿ ಆರೋಗ್ಯ ತಪಾಸಣೆ, ಮದ್ಯ, ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರುವುದು ದೈನಂದಿನ ಕಾರ್ಯಗಳ ಜತೆಗೆ ವ್ಯಾಯಾಮ-ಯೋಗವನ್ನು ರೂಢಿಸಿಕೊಳ್ಳಲು ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಮಹಿಳಾ ಸಂಘದ ಅಧ್ಯಕ್ಷೆ ಡಾ.ರೇಣುಕಾ ಮಂಜನಾಥ ಮಾತನಾಡಿ, ಮದುವೆ ನಂತರದಲ್ಲಿ ಕುಟುಂಬದ ಸಂಪೂರ್ಣ ಆರೈಕೆಗೆ ತೊಡಗುವ ಮಹಿಳೆಯ ಆರೋಗ್ಯದ ಜವಾಬ್ದಾರಿ ಕುಟುಂಬದ ಇತರ ಸದಸ್ಯರದು ಸಹ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಟ 30 ನಿಮಿಷಗಳ ವ್ಯಾಯಾಮವನ್ನು ಎಲ್ಲರೂ ಮಾಡಲು ಸಮಯ ಮೀಸಲು ಇಡಬೇಕು. ಸಾಧ್ಯವಾದರೆ ಸೈಕಲ್ ಬಳಕೆ ಪರಿಣಾಮಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೆಂದ್ರ ಕುಮಾರ, ಐಎಎಂ ಜಿಲ್ಲಾಧ್ಯಕ್ಷೆ ಡಾ.ರೇಣುಕಾ ಮಂಜುನಾಥ, ಬಳ್ಳಾರಿ ಸೈಕಲ್ ಕ್ಲಬ್ ಅಧ್ಯಕ್ಷ ಡಾ.ಬಿ.ಕೆ.ಸುಂದರ್, ಡಾ.ರವಿಶಂಕರ, ಡಾ.ಸೋಮನಾಥ, ಡಾ.ಚಂದ್ರಶೇಖರ, ಡಾ.ದಿನೇಶ ಗುಡಿ, ಡಾ.ಸಂಗೀತಾ ಕಟ್ಟಿ, ಡಾ.ಕಲ್ಪನಾ, ಪ್ರಶಾಂತ್, ಡಾ.ಜಬೀನಾ ತಾಜ್, ಈಶ್ವರ ದಾಸಪ್ಪನವರ, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಸೈಕಲ್ ಜಾಥಾವು ಜಿಲ್ಲಾಸ್ಪತ್ರೆಯಿಂದ ಆರಂಭವಾಗಿ ಸಂಗಮ ಸರ್ಕಲ್ ನಿಂದ ಎಚ್.ಆರ್.ಗವಿಯಪ್ಪ ವೃತ್ತದ ಮೂಲಕ ಸುಧಾ ಸರ್ಕಲ್‌ನಿಂದ ಎಸ್.ಪಿ ಸರ್ಕಲ್ ಮಾರ್ಗವಾಗಿ ದುರ್ಗಮ್ಮ ದೇವಸ್ಥಾನದಿಂದ ರಾಯಲ್ ಸರ್ಕಲ್ ಮೂಲಕ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ ಎಂಬ ಮಾಹಿತಿ ಫಲಕಗಳು ಕಂಡುಬಂದವು.