ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಮಾಧ್ಯಮ ಕ್ಷೇತ್ರವೂ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ, ಸಮಾಜದ ಓರೆಕೋರೆಗಳನ್ನು ತಿದ್ದುವ, ಸಮಾಜದ ಆಗುಹೋಗುಗಳ ಬಗ್ಗೆ ತಿಳಿಸುವ, ಆಡಳಿತ ಯಂತ್ರವನ್ನು ಸದಾ ಎಚ್ಚರದಿಂದಿರಿಸುವ ಮಾಧ್ಯಮ ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದು ದೇವನಹಳ್ಳಿಯ ಗ್ರೇಡ್-2 ತಹಸೀಲ್ದಾರ್ ಉಷಾ ಹೇಳಿದರು.
ದೇವನಹಳ್ಳಿ ಪಟ್ಟಣದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ತಾಲೂಕು ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ಒನಕೆ ಓಬವ್ವ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಮೊದಲ ಪ್ರಜೆ ರಾಷ್ಟ್ರಪತಿಯಾದಿಯಾಗಿ ಯಾರೇ ಆದರೂ ಅವರನ್ನು ಪ್ರಶ್ನಿಸುವ ಸ್ವಾತಂತ್ರ್ಯದೊಂದಿಗೆ ಯಾವುದೇ ಆಮಿಷ, ಬೆದರಿಕೆ ಬಗ್ಗದೆ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಸಮಾಜಕ್ಕೆ ಮಾದರಿ ಎನಿಸಿದ್ದಾರೆ ಎಂದರು.
ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲಿ: ದೇವನಹಳ್ಳಿ ತಾಲೂಕಿನ ಪತ್ರಕರ್ತರ ಸಾಧನೆ ಗುರುತಿಸಿ ಈ ಬಾರಿ ಜಿಲ್ಲಾಡಳಿತ ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ, ಮುಂದಿನ ದಿನಗಳಲ್ಲಿ ತಾಲೂಕಿನ ಪತ್ರಕರ್ತರು ಸಾಧನೆ ಹಾದಿಯಲ್ಲಿ ಸಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಉಷಾ ಆಶಯ ವ್ಯಕ್ತಪಡಿಸಿದರು.
ವಸ್ತುನಿಷ್ಟ ವರದಿಗಾರಿಕೆ: ಯಾವುದೇ ಸಂದರ್ಭವಾದರೂ ಯಾವುದೇ ಹಿಂಜರಿಕೆಯಿಲ್ಲದೇ ವಸ್ತುನಿಷ್ಟ ವರದಿ ಮಾಡುವ ಪತ್ರಕರ್ತರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತಾಲೂಕು ಮಟ್ಟದ ರಾಜ್ಯೋತ್ಸವದ ಪ್ರಯುಕ್ತ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾದ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು.ದೇವನಹಳ್ಳಿ ತಾಲೂಕು ಅಧ್ಯಕ್ಷ ಸುನೀಲ್ ಮಾತನಾಡಿ, ಸಮಾಜದ ಹಲವಾರು ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಪರಿಶೀಲಿಸಿ ತಮ್ಮ ವರದಿಗಾರಿಕೆಯ ಶೈಲಿಯಲ್ಲಿ ಸರ್ಕಾರಕ್ಕೆ ತಲುಪಿಸುವಂತಹ ಹಾಗೂ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪುರಸ್ಕೃತರಿಗೆ ಅಭಿನಂದನೆ: ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗ್ರಾಮಾಂತರ ಜಿಲ್ಲಾ ವರದಿಗಾರ ಎಂ.ಶಿವರಾಜ್ ಹಾಗೂ ನಾಲ್ವರು ಪತ್ರಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
-----------------