ಮಳವಳ್ಳಿ: ಪದೋನ್ನತಿ ಹೊಂದಿ ಅಧಿಕಾರ ಸ್ವೀಕರಿಸಿದ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದವರಿಗೆ
ಮಂಗಳವಾರ ವಕೀಲರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ಎಚ್. ಎಸ್. ಕಾವ್ಯಶ್ರೀ ಮಾತನಾಡಿ, ನ್ಯಾಯಾಲಯ ನನ್ನ ವೃತ್ತಿ ಬದುಕಿನ ಮಹತ್ವದ ಸ್ಥಳವಾಗಿದೆ. ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಸಿವಿಲ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ ಸಚಿನ್ ಕುಮಾರ್ ಶಿವಪೂಜಿ ಮಾತನಾಡಿ, ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟು ತಮ್ಮ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಪ್ರಕರಣಗಳನ್ನು ದಾಖಲಿಸುವ ಜನ ಸಾಮಾನ್ಯರಿಗೆ ಮನಸಾಕ್ಷಿ ಒಪ್ಪುವಂತಹ ನ್ಯಾಯ ಕೊಡಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಮಾದೇಶ್, ವಕೀಲರ ಸಂಘದ ಅಧ್ಯಕ್ಷ ಸುಂದರ್, ಉಪಾಧ್ಯಕ್ಷ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ನಟೇಶ್, ವಕೀಲರಾದ ನಾರಾಯಣ, ವಿಜಯ್ ಭಾಸ್ಕರರಾವ್, ಹೇಮಂತ, ರಾಣಿ, ಮಹೇಶ, ರಮೇಶ, ಚಂದ್ರು ಇತರರು ಇದ್ದರು.