ಕಲಬುರಗಿ: ನಿರ್ಭಯ… ಹೀಗೆ ಬರೆದುಕೊಂಡು ಅದರಂತೆ ಬದುಕುತ್ತಿರುವ ಶಾಸಕ ಬಿ.ಆರ್.ಪಾಟೀಲ್ ಅವರು ಯಾರಿಗೂ ಅಂಜುವುದಿಲ್ಲ, ಬಗ್ಗೋದಿಲ್ಲ. ಸತ್ಯ, ನಿಷ್ಠ, ಪ್ರಾಮಾಣಿಕ ಕಾಳಜಿ ಹೊಂದಿದವರು ಮಾತ್ರ ಹೀಗೆ ನಿರ್ಭಯದಿಂದ ಬದುಕಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮುಖ್ಯಮಂತ್ರಿ ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನಹೊಂದಿ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸತ್ಯ ಹೇಳಲು ಭಯ ಇರಬಾರದು. ಬಿ.ಆರ್.ಪಾಟೀಲರು ಅಬಕಾರಿಯ ೩೫ ಸಾವಿರ ಕೋಟಿ ರೂ.ನ ಪಾಪದ ದುಡ್ಡಿನಿಂದ ಸರ್ಕಾರ ನಡೆಸೋದು ಬೇಡ ಎಂದು ನೇರವಾಗಿ ಸಿಎಂಗೆ ಹೇಳಿದ್ದರು. ಸರ್ಕಾರ, ಸಿಎಂ, ಸಚಿವರಿಂದ ಹಣ, ಬಜೆಟ್ ಬೇಕು ಎನ್ನುವವರು ಈ ರೀತಿ ಮಾತಾಡಲ್ಲ. ಅದಕ್ಕೆ ಧೈರ್ಯ, ಜನಪರ ಕಾಳಜಿ ಇರಬೇಕು ಎಂದು ಹೇಳಿದರು.
ಪಾಟೀಲ್ ಅವರಿಗೆ ಸಲಹೆಗಾರ ಜವಾಬ್ದಾರಿ ದೊರೆತ್ತಿದ್ದು, ನಮ್ಮ ಜಿಲ್ಲೆಯ ಮತ್ತೊಂದು ಗಟ್ಟಿ ಧ್ವನಿ ದೊರಕಿದೆ. ಇವರಿಂದ ಕಲ್ಯಾಣ ಕರ್ನಾಟಕಕ್ಕೆ ಕೊಡುಗೆ ದೊರೆಯಲಿದೆ. ಪಾಟೀಲರು ದೇಶ್ಯಾದ್ಯಂತ ರೈತ, ಕಾರ್ಮಿಕ, ಸಮಾಜವಾದಿ ಹೋರಾಟದಲ್ಲಿ ಭಾಗಿಯಾಗಿದ್ದು, ಅವರ ಅನುಭವದ ಗುಚ್ಚದಿಂದ ಜನಪರ ನೀತಿ, ಸಲಹೆಗಳು ಬರಲಿವೆ ಎಂದರು.
ಸನ್ಮಾನ ಸ್ವೀಕರಿಸಿದ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್ ಮಾತನಾಡಿ, ಎಷ್ಟು ದಿನ ಬದುಕುತ್ತೇವೋ ಗೊತ್ತಿಲ್ಲ. ಸೇವೆ ಮಾಡೋಣ. ಬಿಹಾರದಲ್ಲಿ ಮದ್ಯ ನಿಷೇಧಿಸಲಾಗಿದೆ. ಶೇ.೭೦ ಕಡಿಮೆ ಆಗಿದೆ. ನಮ್ಮಲ್ಲೂ ಆ ನಿಟ್ಟಿನಲ್ಲಿ ಪ್ರಯತ್ನಿಸಬಹುದು. ಆಗ ಜನರು ರಾತ್ರಿ ೯ಕ್ಕೆ ಮನೆಗೆ ಬರುತ್ತಾರೆ. ಮದ್ಯನಿಷೇಧದಂತ ಸಕಾರಾತ್ಮಕ ಚಿಂತನೆಯ ಸಲಹೆ ನೀಡುತ್ತೇನೆ. ಎಲ್ಲರ ಆಶೀರ್ವಾದ ಪ್ರೋತ್ಸಾಹದಿಂದ ಸಲಹೆಗಾರನಾಗಿದ್ದೇನೆ ಎಂದು ಹೇಳಿದರು.
ನಮ್ಮಲ್ಲಿ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ. ಅವರ ಬಗ್ಗೆ ಜನರಲ್ಲಿ ತಪ್ಪು ಭಾವನೆ ಇದೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೊಮ್ಮೆ ಜಿಲ್ಲೆಯಿಂದ ಗೆಲ್ಲಿಸಲು ಕೈಕಾಲು ಬೀಳೋಣ. ಜಿಲ್ಲಾ, ತಾಲೂಕು ಪಂಚಾಯಿತಿ, ಎಪಿಎಂಸಿ ಸೇರಿ ಸ್ಥಳೀಯ ಚುನಾವಣೆಗೆ ಸಿದ್ಧರಾಗಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ. ಕಾರ್ಯಕರ್ತರು ಲೀಡರ್‌ಗಳ ಮನೆ ಬಾಗಿಲು ಕಾಯದೆ ಜನರ ಮನೆ ಬಾಗಿಲಿಗೆ ಹೋಗಬೇಕು ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಪ್ರಮುಖರಾದ ರೇವುನಾಯಕ ಬೆಳಮಗಿ, ಭಾಗಣ್ಣಗೌಡ ಸಂಕನೂರ, ಸೋಮಶೇಖರ ಗೋನಾಯಕ, ಬಸವರಾಜ ಭೀಮಳ್ಳಿ, ಸುಭಾಷ ರಾಠೋಡ, ಲತಾ ರಾಠೋಡ, ಚಂದ್ರಿಕಾ ಪರಮೇಶ್ವರಿ, ಭೀಮಾಶಂಕರ ಬಿಲಗುಂದಿ, ಆರ್.ಕೆ.ಪಾಟೀಲ್, ರಮೇಶ ಭೂಸನೂರ, ಚಂದ್ರಶೇಖರ ಸುಲ್ತಾನಪುರ, ಬಾಬುರಾವ ಜಹಾಗೀರದಾರ, ಮಹಾಂತಪ್ಪ ಸಂಗಾವಿ, ಮಜರ್ ಹುಸೇನ್, ಶಿವಾನಂದ ಪಾಟೀಲ್, ಸಂತೋಷ ಪಾಟೀಲ್ ದಣ್ಣೂರ, ಈರಣ್ಣ ಝಳಕಿ, ಶಿವಾನಂದ ಹೊನಗುಂಟಿ, ರೇಣುಕಾ ಸಿಂಗೆ, ರಾಹುಲ್ ಹೊನ್ನಳ್ಳಿ, ರಾಜೇಶ ಗುತ್ತೇದಾರ್, ಸೋಮಶೇಖರ ಹಿರೇಮಠ ಇತರರಿದ್ದರು.