ಜಿಲ್ಲೆ

ಕಲಾವಿದರ ಖಣಜ ತುಮಕೂರು ಜಿಲ್ಲೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಿಲ್ಲೆ ಕಲಾವಿದರ ಖಣಜ, ಕಲಾವಿದರಿಗೆ ಕೊರತೆಯಿಲ್ಲ. ಶಾಲಾ, ಕಾಲೇಜುಗಳಲ್ಲಿ ಈ ನೆಲದ ಕಲೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ನಿಮ್ಮಲ್ಲಿರುವ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು, ಅವರನ್ನು ನಿಮ್ಮ ವಾರಸುದಾರರನ್ನಾಗಿ ಮಾಡಲು ಸಾಧ್ಯ ಎಂದು ಹಾಲಪ್ಪ ಪ್ರತಿಷ್ಠಾನದ ಮುರಳೀಧರ ಹಾಲಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷ್​ತ್​, ಹಾಲಪ್ಪ ಪ್ರತಿಷ್ಠಾನ ಹಾಗೂ ಕರ್ನಾಟಕ ಸಾಂಸತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ಜಿಲ್ಲೆಯ ಕಲಾವಿದರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಕಲಾವಿದರು ಸೇರಿದಂತೆ ಕಲಾವಿದರುಗಳಿಗೆ ಸಿಗಬೇಕಾದ ಗೌರವ ದೊರೆಯುತ್ತಿಲ್ಲ ಎಂದು ಬೇಸರಿಸಿದರು.

ಕೇವಲ ನಾಡಗೀತೆ, ಟ್ಯಾಬ್ಲೋ ಮೆರವಣಿಗೆಗೆ ಮಾತ್ರ ಕಲಾವಿದರ ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಯಾವುದೇ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳ ಬರುವಿಕೆಗಾಗಿಯೇ ಕಾದು ಕುಳಿತುಕೊಳ್ಳುವ ಅಧಿಕಾರಿಗಳು, ಅವರು ಬಂದಾಕ್ಷಣ ದೀಪ ಹಚ್ಚಿಸಿ, ಭಾಷಣ ಮಾಡಿಸಿ ಕಳುಹಿಸಿಕೊಡುತ್ತಾರೆ. ಕಲೆ ಪ್ರದರ್ಶನಕ್ಕೆ ಅವಕಾಶಗಳೇ ದೊರೆಯುವುದಿಲ್ಲ. ಈ ಸಂಪ್ರದಾಯ ಬದಲಾಗಬೇಕು. ಕಲಾವಿದರಿಗೆ ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಿದರೆ ಮುಂದಿನ ಪೀಳಿಗೆಗೆ ಕಲೆಯನ್ನು ಪರಿಚಯಿಸಲು ಸಾಧ್ಯವಾಗಲಿದೆ ಎಂದರು.

ಉತ್ತರ ಕರ್ನಾಟಕ ವೃತ್ತಿ ರಂಗಭೂಮಿ, ಕರಾವಳಿಯಲ್ಲಿ ಯಕ್ಷಗಾನದ ರೀತಿ ತುಮಕೂರು ಜಿಲ್ಲೆ ಪೌರಾಣಿಕ ನಾಟಕಗಳಿಗೆ ಹೆಸರುವಾಸಿ. ಮುಂದಿನ ಆರು ತಿಂಗಳ ಕಾಲ ಗುಬ್ಬಿ ವೀರಣ್ಣ ಕಲಾಕ್ಷೇತ್ರ ಶನಿವಾರ, ಭಾನುವಾರ ಮುಂಗಡ ಬುಕ್​ ಆಗಿದೆ. ಪೌರಾಣಿಕ ರಂಗಭೂಮಿಯ ಹೊಸ ದುನಿಯಾ ಆರಂಭವಾಗಿರುವುದರ ಸಂಕೇತ ಎಂದು ನಾಟಕ ಅಕಾಡೆಮಿ ಸದಸ್ಯ ಉಗಮಶ್ರೀನಿವಾಸ್​ ಹೇಳಿದರು.

ರಾಜ್ಯದ ಆರು ರಂಗಾಯಣಗಳ ಜತೆಗೆ ಬೆಂಗಳೂರು ವಿಭಾಗದಲ್ಲಿ ಮತ್ತೊಂದು ರಂಗಾಯಣ ತೆರೆಯುವ ಪ್ರಸ್ತಾಪವಿದೆ. ಈಗಾಗಲೇ ಬೆಂಗಳೂರಿನಲ್ಲಿ ಎನ್​ಎಸ್​ಡಿ ಇದೆ. ರಂಗಶಂಕರ್​ ಸೇರಿದಂತೆ ಹಲವಾರು ಸಂಸ್ಥೆಗಳು ರಂಗಭೂಮಿಗೆ ಕೆಲಸ ಮಾಡುತ್ತಿವೆ. ಹಾಗಾಗಿ, ಬೆಂಗಳೂರು ವಿಭಾಗದ ರಂಗಾಯಣವನ್ನು ತುಮಕೂರಿನಲ್ಲಿ ಆರಂಭಿಸಲಿ ಎಂಬುದು ನಮ್ಮಗಳ ಆಶಯ. ಈಗಾಗಲೇ ಈ ಸಂಬಂಧ ಹಲವಾರು ಮನವಿಗಳನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ. ತುಮಕೂರು ಅಧುನಿಕ ಮತ್ತು ಪೌರಾಣಿಕ ರಂಗಭೂಮಿಯ ಸಮ್ಮಿಲನದಂತಿದೆ. ಹಾಗಾಗಿ ಇಲ್ಲಿಗೆ ರಂಗಾಯಣ ಬಂದರೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್​ ಪ್ರಸಾದ್​, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್​.ಶಿವಣ್ಣ, ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಸಿ.ಜಯಕುಮಾರ್​, ಕಾರ್ಯದರ್ಶಿ ಬಸವರಾಜು ಐನಾಪುರ ಮತ್ತಿತರರು ಉಪಸ್ಥಿತರಿದ್ದರು.

ತುಮಕೂರು ಜಿಲ್ಲೆ ಕಲೆಯ ತವರೂರು, ಒಂದು ಸಮೀಕ್ಷೆ ಪ್ರಕಾರ ಒಂದು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 14ಸಾವಿರ ಪೌರಾಣಿಕ ನಾಟಕಗಳು ಪ್ರದರ್ಶನಗೊಂಡರೆ, ಅವುಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅದರಲ್ಲು ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು. ಸರ್ಕಾರದ ಅನುದಾನವಿಲ್ಲದೆ ಒಂದು ನಾಟಕಕ್ಕೆ ಲಾಂತರ ರೂಪಾಯಿ ರ್ಖಚಾದರೆ 14 ಸಾವಿರ ನಾಟಕಗಳಿಗೆ ಎಷ್ಟು ಕೋಟಿ ರ್ಖಚಾಗುತ್ತದೆ. ಇದು ಪೌರಾಣಿಕ ಕಲಾವಿದರ ತಾಕತ್ತು. 1.50 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ 15 ಪ್ರಶಸ್ತಿ ಬಂದರೆ, ತುಮಕೂರು ಜಿಲ್ಲೆಗೆ 11 ಪ್ರಶಸ್ತಿ ಬಂದಿದೆ. ರವೀಂದ್ರ ಸಿರಿವರ ನಾಟಕ ಅಕಾಡೆಮಿ ಸದಸ್ಯ