ಕೊಟ್ಟೂರಿನ ಶ್ರೀಗುರು ಬಸವೇಶ್ವರ ಸ್ವಾಮಿ ದೇವಸ್ಥಾನ. 
ಜಿಲ್ಲೆ

ಫೆ. 22ರಂದು ಕೊಟ್ಟೂರೇಶ್ವರ ರಥೋತ್ಸವ

ಶ್ರೀನಾಥ

ಕೊಟ್ಟೂರು: ಫೆ. 22ರಂದು ಜರುಗಲಿರುವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಕಡೆಯಿಂದ ಭಕ್ತಗಣ ಆಗಮಿಸುತ್ತಿದೆ.

ಪಟ್ಟಣದ ಕೂಡ್ಲಿಗಿ, ಜಗಳೂರು, ಇಟ್ಟಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಚಿರಬಿ ಮಾರ್ಗದಲ್ಲಿ ಶುಕ್ರವಾರ ಪಾದಯಾತ್ರಿಗಳು ತಂಡೋಪತಂಡವಾಗಿ ಆಗಮಿಸಲಿದ್ದಾರೆ. ಪಾದಯಾತ್ರಿಗಳ ಆಯಾಸ ತಣಿಸಲು ಸ್ಥಳೀಯ ನಿವಾಸಿಗಳು ಹಾಗೂ ಮಾರ್ಗ ಮಧ್ಯೆ ಸ್ವಯಂ ಸೇವಕರು ತಂಪು ಪಾನೀಯ, ಹಣ್ಣು, ಉಪಹಾರ, ಊಟ ಹಾಗೂ ಉಚಿತ ವೈದ್ಯಕೀಯ ಸೇವೆ ಮಾಡಲು ಸಿದ್ಧರಾಗಿದ್ದಾರೆ.

ಸ್ವಾಮಿಯ ರಥೋತ್ಸವಕ್ಕೆ ಆಗಮಿಸುವ ಭಕ್ತರ ಹಿತದೃಷ್ಟಿಯಿಂದ ಒಟ್ಟು 850 ಪೊಲೀಸರಿಂದ ಭದ್ರತೆ ಒದಗಿಸಲಾಗುತ್ತಿದೆ. ಮೂವರು ಡಿವೈಎಸ್ಪಿ, 15 ಜನ ಸಿಪಿಐ, 35 ಜನ ಪಿಎಸ್‌ಐ ಹಾಗೂ 750 ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಸಹಕಾರದೊಂದಿಗೆ 18 ವೃತ್ತಗಳು ಸೇರಿ ಪಟ್ಟಣದ 65 ಕಡೆ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು, ಎರಡು ಕಡೆ ತಾತ್ಕಾಲಿಕವಾಗಿ ವೀಕ್ಷಣಾ ಗೋಪುರದ ವ್ಯವಸ್ಥೆ ಇದೆ. ಮುಂಜಾಗ್ರತೆ ಕ್ರಮವಾಗಿ ಬೆಲೆ ಬಾಳುವ ಆಭರಣಗಳನ್ನು ಧರಿಸಿಕೊಂಡು ರಥೋತ್ಸವ ಮತ್ತು ಜಾತ್ರೆಗೆ ಬಾರದಂತೆ ಮೈಕ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ರಥೋತ್ಸವಕ್ಕೆ ಬರುವ ಭಕ್ತರಿಗೆ ಮನರಂಜನೆ ನೀಡಲು ದಾವಣಗೆರೆ ಕೆ.ಬಿ.ಆರ್. ಡ್ರಾಮಾ ಕಂಪನಿ, ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ, ಚಿತ್ತರಗಿ ಶ್ರೀಕುಮಾರ ವಿಜಯ ನಾಟಕ ಸಂಘದ ರಂಗಸಜ್ಜಿಕೆ ಸಜ್ಜುಗೊಂಡಿವೆ. ತೇರು ಬಯಲಿನಲ್ಲಿ ಗುರುವಾರ ನಡೆಯುತ್ತಿದ್ದ ವಾರದ ಸಂತೆಯುವ ಜಾತ್ರೆ ನಿಮಿತ್ತ ರೇಣುಕಾ ಟಾಕೀಸ್ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ರಸ್ತೆ ಮಧ್ಯೆಯೇ ಸಂತೆ ನಡೆದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

82 ಜನಕ್ಕೆ 1 ಕೋಟಿ ರೂ. ವಿಮೆ: ಶ್ರೀಗುರು ಕೊಟ್ಟೂರೇಶ್ವರ ಜಾತ್ರೋತ್ಸವದ ಅಂಗವಾಗಿ ಆಯಗಾರರು ಮತ್ತು ಪೂಜಾ ಕೈಂಕರ್ಯ ನೆರವೇರಿಸುವ ಒಟ್ಟು 82 ಜನಕ್ಕೆ ಫೆ.22ರಿಂದ ರಥವು ತೇರಿನ ಮನೆ ಸೇರುವವರೆಗೆ ಅನ್ವಯವಾಗುವಂತೆ ಒಂದು ಕೋಟಿ ರೂ. ವಿಮೆ ಮಾಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆಯು ಇದೇ ಮೊದಲ ಬಾರಿಗೆ ಈ ಕ್ರಮ ಕೈಗೊಂಡಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಶುಕ್ರವಾರ ತಿಳಿಸಿದ್ದಾರೆ.

ಕೊಟ್ಟೂರು ಜಾತ್ರೆಗೆ ವಿಶೇಷ ಬಸ್ ಸೌಕರ್ಯ: ಕೊಟ್ಟೂರಿನಲ್ಲಿ ಫೆ.22 ರಂದು ಜರುಗಲಿರುವ ಶ್ರೀ ಗುರುಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿವಿಧ ಘಟಕಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಫೆ.21 ರಿಂದ ಫೆ.23 ರವರೆಗೆ ಹೊಸಪೇಟೆ, ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಭಾಗದಿಂದ ವಿಶೇಷ ಬಸ್‌ಗಳು ಕೊಟ್ಟೂರಿಗೆ ಸಂಚರಿಸಲಿವೆ ಎಂದು ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.