ಪ್ರಸಿನ್ ಕೆ.ಆರ್. ಮೈಸೂರು
ಮೈಸೂರು ದಸರಾ ಮಹೋತ್ಸವ ಅಂಗವಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆವತಿಯಿಂದ ನಗರದ ಜೀವರಾಯನಕಟ್ಟೆ(ಜೆಕೆ) ಮೈದಾನದಲ್ಲಿ ಆಯೋಜಿಸಿದ್ದ ಶ್ವಾನ/ಮುದ್ದು ಪ್ರಾಣಿಗಳ ಪ್ರದರ್ಶನ ನೋಡುಗರನ್ನು ಆಕರ್ಷಿಸಿದವು.
ವಿವಿಧ ಭಾಗದಿಂದ ಆಗಮಿಸಿದ್ದ ದೇಶ, ವಿದೇಶಿ ತಳಿಯ ಶ್ವಾನಗಳು ನೆರೆದಿದ್ದವರನ್ನು ವಿಶಿಷ್ಟವಾಗಿ ಗಮನಸೆಳೆದವು.
ಈ ಬಾರಿಯ ದಸರಾ ಪ್ರದರ್ಶನದಲ್ಲಿ 45 ತಳಿಯ 480 ಶ್ವಾನಗಳು ಪಾಲ್ಗೊಂಡಿದ್ದವು.
ಬೆಳಗ್ಗೆಯಿಂದಲೇ ಅತ್ಯಂತ ಹುರುಪಿನಿಂದ ಮಾಲೀಕರು ಶ್ವಾನಗಳೊಂದಿಗೆ ಮೈದಾನಕ್ಕೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ತಮ್ಮ ಪ್ರೀತಿಯ ಶ್ವಾನಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಫೋಟೋಗಳ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಶ್ವಾನ ಪ್ರದರ್ಶನಕ್ಕೆ ನಗರ ಸೇರಿದಂತೆ ವಿವಿಧ ಭಾಗದಿಂದ ಸಾಕಷ್ಟು ಜನರು ಆಗಮಿಸಿ ಕಣ್ತುಂಬಿಕೊಂಡರು. ಅಲ್ಲದೆ ಅಪರೂಪದ ಧೈತ್ಯ ಹಾಗೂ ಮುದ್ದು ಮುದ್ದಾದ ಪ್ರಾಣಿಗಳ ಫೋಟೋ ಕ್ಲಿಕ್ಕಿಸಿ ಸಂತಸ ಪಟ್ಟರು.
ಮಾಲ್ಟೀಸ್, ಜರ್ಮನ್ ಸಫರ್ಡ್, ಲಾಸಾ ಆಪ್ಸೋ, ಟಿಬೆಟಿಯನ್ ಮಸ್ಚೀಫ್, ಇಂಡಿಯನ್ ಮಸ್ಚೀಫ್, ಡಾಬರ್ ಮನ್, ಮುದೋಳ್, ಸೈಬರಿಯನ್ ಹಸ್ಕಿ, ಮಿನಿಯೇಚರ್ ಪಿನ್ಸ್ಚರ್, ಐರಿಸ್ ಶೆಟ್ಟರ್, ಅಕಿಟಾ, ಲ್ಯಾಬ್ರಡಾಗ್, ಚಿಹೂಹಾ, ಪೂಡಲ್, ಡೋಗೋ ಅರ್ಜಟೈನಾ, ಬಿಹಾನ್, ಗ್ರೇಟ್ ಡೇನ್, ಪೊಮೊರಿಯನ್, ರಾಜಾ ಪಾಳ್ಯಮ್, ಡಾಲ್ಮಟೇಯಿನ್, ಕೇನ್ ಕೋರ್ಸೋ, ಪೆಟ್ ಬುಲ್ ಸೇರಿದಂತೆ 45 ತಳಿಯ ಶ್ವಾನಗಳು ಪಾಲ್ಗೊಂಡು ಗಮನಸೆಳೆದವು.
ಸುಧಾಮೂರ್ತಿ ಭಾಗಿ: ದಸರಾ ಶ್ವಾನ ಪ್ರದರ್ಶನದಲ್ಲಿ ರಾಜ್ಯಸಭಾ ಸದಸ್ಯರಾದ ಇನ್ಫೋಶಿಸ್‌ನ ಸುಧಾ ಮೂರ್ತಿ ಅವರು ತಮ್ಮ ಗೋಲ್ಡನ್ ರಿಟ್ರೀವರ್ ತಳಿಯ ಗೋಪಿ ಹೆಸರಿನ ಶ್ವಾನದೊಂದಿಗೆ ಭಾಗವಹಿಸಿ ಗಮನಸೆಳೆದರು.
ಶ್ವಾನ/ಮುದ್ದು ಪ್ರಾಣಿಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತ ದಸರಾ ಉಪಸಮಿತಿ ಉಪವಿಶೇಷಾಧಿಕಾರಿ ಡಾ.ಎಂ. ಕೃಷ್ಣರಾಜು, ಸಹಕಾರ್ಯದರ್ಶಿ ಡಾ.ನಾಗರಾಜು, ಜಂಟಿ ನಿರ್ದೇಶಕ ಡಾ.ಶಿವಣ್ಣ, ಬಿ.ಎಸ್.ರವಿ ಹಾಗೂ ರಥ ದಸರಾ ಉಪಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಡಾ. ಕೆ.ಪಿ. ಪರಮೇಶ್ವರ್, ಉದಯರವಿ ಭಟ್, ಡಾ.ಭರತ್ ರಾಜ್ ಪಾಲ್ಗೊಂಡಿದ್ದರು.
ಬಹುಮಾನ ಪಡೆದ ಶ್ವಾನಗಳು: ಮೊದಲನೇ ಬಹುಮಾನ ಜರ್ಮನ್ ಶಫರ್ಡ್, ಕಿರಣ್, ಎರಡನೇ ಬಹುಮಾನ ಮುದೋಳ, ಸಂದೀಪ್, ಮೂರನೇ ಬಹುಮಾನ ರಾಟ್ ವೀಲರ್, ಸೋಮಾ, ನಾಲ್ಕನೇ ಬುಹಾಮನ ಗ್ರೇಟ್‌ಡೆನ್,ಅಭಯ್, ಐದನೇ ಬುಮಾನ ಲಾಹಸ್ ಆಪ್ರ, ಅನುಷಾ, ಆರನೇ ಬುಮಾನ ಶಿಟ್ ಜೂ, ಎನ್.ಚಂದ್ರಶೇಖರ, ಏಳನೇ ಬಹುಮಾನ ಗೋಲ್ಡನ್ ರಿಟ್ರಿವರ್ ಸುಪ್ರೀತ್, ಎಂಟನೇ ಬಹುಮಾನ ಬೀಗಲ್ ಮಧು ಸೂದನ್ ಪಡೆದುಕೊಂಡರು.
ಮೈದಾನ ಕೆಸರುಮಯ: ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಜೆಕೆ ಮೈದಾನ ಕೆಸರು ಗದ್ದೆಯಂತಾಗಿ ಮಾರ್ಪಾಡಾಗಿತ್ತು. ಎಲ್ಲಿ ನೋಡಿದರು ಕೆಸರು, ಹೆಜ್ಜೆ ಇಡಲು ಸಾಧ್ಯವಾಗದಂತಹ ಪರಿಸ್ಥಿತಿ ಮೈದಾನದಲ್ಲಿ ನಿರ್ಮಾಣವಾಗಿತ್ತು.
ರೈತ ದಸರಾ ವಸ್ತು ಪ್ರದರ್ಶನ, ಮಹಿಳಾ ದಸರಾ ವಿಭಾಗೀಯ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ, ಮತ್ಸೃ ಮೇಳ ಹಾಗೂ ಶ್ವಾನ ಪ್ರದರ್ಶನವನ್ನು ತೆರೆದ ಮೈದಾನದಲ್ಲಿ ಆಯೋಜಿಸಲಾಗಿದ್ದು, ನೆರೆದಿದ್ದ ನೂರಾರು ಜನರು ಕೆಸರಿನ ಮಧ್ಯೆ ಓಡಾಡಲು ಹೈರಾಣಾದರು.
ಭಾನುವಾರ ಶ್ವಾನ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದ್ದರಿಂದ ಅನೇಕ ಸಂಖ್ಯೆಯಲ್ಲಿ ಜನರು ಬೆಳಗ್ಗೆಯಿಂದಲೇ ಆಗಮಿಸಿದ್ದರು. ಸ್ಪರ್ಧಿಗಳು ಹಾಗೂ ಪ್ರವಾಸಿಗರು ವಿವಿಧ ಭಾಗದಿಂದ ಆಗಮಿಸಿದ್ದರು. ಮೈದಾನ ಪೂರ್ಣ ಕೆಸರುಮಯವಾಗಿದ್ದರಿಂದ ಜನರು ಕಷ್ಟದಲ್ಲಿ ಓಡಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.