ಮಡಿಕೇರಿ:
ಕಾಫಿಗೆ ಉತ್ತಮ ಬೆಲೆ ಸಿಗುತ್ತಿರುವ ಬಗ್ಗೆ ಬೆಳೆಗಾರರ ಖುಷಿಯನ್ನು ಕರಿಮೆಣಸು ದರ ಕುಸಿತ ಕಸಿದುಕೊಳ್ಳುತ್ತಿದೆ. ಇನ್ನಷ್ಟೇ ಮೆಣಸಿನ ಕೊಯ್ಲು ಆರಂಭವಾಗಬೇಕಿದ್ದು, ಹೊಸ ಸರಕು ಮಾರುಕಟ್ಟೆಗೆ ಬರುವ ಮೊದಲೇ ಬೆಲೆ ಇಳಿಕೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಈ ಬಾರಿ ಫಸಲು ಕೂಡ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ದರ ಇನ್ನಷ್ಟೂ ಕಡಿಮೆ ಆಗಬಹುದು ಎನ್ನುವ ಆತಂಕ ಕಾಡುತ್ತಿದೆ.
ಪ್ರಮುಖ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿರುವ ಕರಿಮೆಣಸು ಉತ್ಪಾದನೆಯಲ್ಲಿ ಕರ್ನಾಟಕ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಮಾಹಿತಿ ಪ್ರಕಾರ ದೇಶದ ಒಟ್ಟು ಕಾಳುಮೆಣಸು ಉತ್ಪಾದನೆಯಲ್ಲಿ ಕರ್ನಾಟಕ ಶೇ. ೬೧ರಷ್ಟು ಪಾಲು ಹೊಂದಿದ್ದು, ವಾರ್ಷಿಕವಾಗಿ ಇಲ್ಲಿ ಸುಮಾರು ೫೫.೬೪ ಮೆಟ್ರಿಕ್ ಟನ್‌ಗಳಷ್ಟು ಕಾಳುಮೆಣಸು ಬೆಳೆಯಲಾಗುತ್ತದೆ. ನಂತರದ ಸ್ಥಾನದಲ್ಲಿ ಇರುವ ಕೇರಳ ಶೇ.೩೩ರಷ್ಟು ಪಾಲು ಪಡೆದುಕೊಂಡಿದ್ದು, ವರ್ಷಕ್ಕೆ ಸುಮಾರು ೩೦ ಮೆಟ್ರಿಕ್ ಟನ್‌ಗಳಷ್ಟು ಕರಿಮೆಣಸು ಉತ್ಪಾದನೆಯಾಗುತ್ತಿದೆ. ಅಸ್ಸಾಂ, ತಮಿಳುನಾಡು ಹಾಗೂ ಮೇಘಾಲಯ ನಂತರ ಸ್ಥಾನಗಳಲ್ಲಿದೆ. ಕರ್ನಾಟಕದಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕರಿಮೆಣಸು ಬೆಳೆಯಲಾಗುತ್ತದೆ.
ಸಾಮಾನ್ಯವಾಗಿ ಕರಿಮೆಣಸನ್ನು ಕಾಫಿ ಅಥವಾ ಅಡಿಕೆ ಜತೆಗೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತದೆ. ಕರಿಮೆಣಸು ಬೆಳೆಗಾರನ ಪಾಲಿಗೆ ಒಂದು ರೀತಿಯಲ್ಲಿ ಆಪತ್ಬಾಂಧವ ಇದ್ದಂತೆ. ಕಾಳು ಮೆಣಸಿನಿಂದ ಬರುವ ಆದಾಯ ತೋಟದ ನಿರ್ವಹಣೆಗೆ ಸಾಕಾಗುತ್ತದೆ. ಮುಖ್ಯ ಬೆಳೆಯ ಆದಾಯ ಬೆಳೆಗಾರನಿಗೆ ಲಾಭ ಇದ್ದಂತೆ ಎನ್ನುವುದು ರೂಢಿಯಲ್ಲಿ ಇರುವ ಲೆಕ್ಕಾಚಾರ. ಒಮ್ಮೊಮ್ಮೆ ಪ್ರಮುಖ ಬೆಳೆಯಾದ ಕಾಫಿ ಅಥವಾ ಕರಿಮೆಣಸು ಫಸಲು ಇಲ್ಲವೇ ದರ ಕೈ ಕೊಟ್ಟಾಗ ಕರಿಮೆಣಸು ಹಲವು ಬಾರಿ ಬೆಳೆಗಾರನ ಕೈ ಹಿಡಿದಿದ್ದಿದೆ. ಹಾಗಾಗಿಯೇ ತೋಟದಲ್ಲಿ ಕರಿಮೆಣಸು ಫಸಲು ಚೆನ್ನಾಗಿದೆ ಎಂದರೆ ಬೆಳೆಗಾರನಿಗೆ ಒಂದು ರೀತಿಯಲ್ಲಿ ನೆಮ್ಮದಿ.
ಈ ವರ್ಷ ಬಹುತೇಕ ತೋಟಗಳಲ್ಲಿ ಕಾಳು ಮೆಣಸು ಫಸಲು ಚೆನ್ನಾಗಿದೆ. ಆದರೆ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದ ಬೆಳೆಗಾರನಿಗೆ ಸೀಸನ್ ಆರಂಭಕ್ಕೂ ಮೊದಲೇ ದರ ಇಳಿತ ಶಾಕ್ ಕೊಟ್ಟಿದೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಕರಿಮೆಣಸು ಬೆಳೆ ಇಳಿಮುಖವಾಗುತ್ತಿರುವುದು ಕಂಡು ಬಂದಿದೆ. ಕಳೆದ ೧೫ ದಿನಗಳಲ್ಲಿ ಕೆಜಿಗೆ ಸುಮಾರು ೩೦ ರೂ.ಗಳಷ್ಟು ಬೆಲೆ ಕಡಿಮೆ ಆಗಿದೆ. ಈ ಹಂಗಾಮಿನ ಸ್ಥಳೀಯ ಹೊಸ ಕರಿಮೆಣಸು ಇನ್ನು ಕೂಡ ಮಾರುಕಟ್ಟೆಗೆ ಬಂದಿಲ್ಲ. ಆಗಲೇ ಬೆಲೆಯ ಇಳಿಯುತ್ತಿರುವುದು ಬೆಳೆಗಾರರನ್ನು ಕಂಗಾಲಾಗಿಸಿದೆ. ಮಾರುಕಟ್ಟೆಯಲ್ಲಿ ಕರಿಮೆಣಸಿನ ಲಭ್ಯತೆ ಹೆಚ್ಚಾಗಿರುವುದು ಮತ್ತು ಗ್ರಾಹಕ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿದಿರುವುದು ಈ ದರ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಶ್ರೀಲಂಕಾ, ವಿಯೆಟ್ನಾಂ ಹಾಗೂ ಮಡಗಾಸ್ಕರ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಕರಿಮೆಣಸು ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಸದ್ದು ಮಾಡುತ್ತಿವೆ. ಅಧಿಕೃತವಾಗಿ ಮತ್ತು ಕಳ್ಳಮಾರ್ಗದಲ್ಲಿ ಬೇರೆ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಕಾಳುಮೆಣಸು ಬರುತ್ತಿದೆ. ಹಾಗಾಗಿ ದೇಶೀಯವಾಗಿ ಉತ್ತಮ ಮಾರುಕಟ್ಟೆ ಹೊಂದಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಸ್ಥಳೀಯ ಕರಿಮೆಣಸಿಗೆ ಬೇಡಿಕೆ ಇಲ್ಲದಂತಾಗಿದೆ. ಆಮದಾಗಿರುವ ಕರಿಮೆಣಸಿಗೆ ಹೋಲಿಸಿದರೆ ಭಾರತದ ಕರಿಮೆಣಸು ಬೆಲೆ ಸ್ವಲ್ಪ ದುಬಾರಿಯೂ ಆಗಿರುವುದರಿಂದ ಬೇಡಿಕೆ ಕಡಿಮೆ ಆಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲು ಕಾರಣವಾಗಿದೆ.
ಈ ಬಾರಿ ಕರಿಮೆಣಸು ಉತ್ಪಾದನೆ ಕಡಿಮೆ ಆಗಬಹುದು ಎನ್ನುವ ತಪ್ಪು ಅಂದಾಜಿನ ಕಾರಣ ಕಳೆದ ಆಗಸ್ಟ್‌ನಲ್ಲಿ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಕರಿಮೆಣಸು ಸಂಗ್ರಹಣೆಗೆ ಇಳಿದಿದ್ದರು. ಹಾಗಾಗಿ ಆ ಸಂದರ್ಭ ಕರಿಮೆಣಸು ದರದಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಉತ್ಪಾದನೆ ಕಡಿಮೆ ಆಗಲಿದೆ ಎನ್ನುವ ಸುದ್ದಿ ಹರಡಿದ್ದರಿಂದ ಉತ್ತರ ಭಾರತ ಸೇರಿದಂತೆ ದೇಶಾದ್ಯಂತ ಇರುವ ಮಸಾಲೆ ಪದಾರ್ಥಗಳ ತಯಾರಕರು ಕೂಡ ಹೆಚ್ಚಿನ ಬೆಲೆ ಕೊಟ್ಟು ಕರಿಮೆಣಸು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದರು. ಈಗ ಪರಿಸ್ಥಿತಿ ಬದಲಾಗಿರುವುದರಿಂದ ಅವರ ಕಡೆಯಿಂದಲೂ ಬೇಡಿಕೆ ಇಲ್ಲದಿರುವುದು ಕೂಡ ದರ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು.
ಬ್ರೆಜಿಲ್, ವಿಯೆಟ್ನಾಂ ಹಾಗೂ ಇಂಡೋನೇಷ್ಯಾದಿಂದ ಭಾರತಕ್ಕೆ ಕಾಳುಮೆಣಸು ಆಮದು ಮಾಡಿಕೊಳ್ಳಲಾಗುತ್ತದೆ. ಭಾರತೀಯ ಕರಿಮೆಣಸು ದರ ಪ್ರತಿ ಟನ್‌ಗೆ ೭,೪೦೦ - ೮,೦೨೫ ಡಾಲರ್‌ಗಳ ಮಧ್ಯೆ ಇದ್ದರೆ ಬ್ರೆಜಿಲ್, ವಿಯೆಟ್ನಾಂ ಹಾಗೂ ಇಂಡೋನೇಷ್ಯಾ ಕರಿಮೆಣಸಿನ ಬೆಲೆ ೩,೫೦೦-೩,೮೦೦ ಡಾಲರ್‌ಗಳಷ್ಟು ಮಾರುಕಟ್ಟೆಯಲ್ಲಿತ್ತು. ಆಮದು ಮಾಡಿಕೊಳ್ಳುವ ಕರಿಮೆಣಸಿಗೆ ಕೇಂದ್ರ ಸರ್ಕಾರ ಕೆಜಿಗೆ ೫೦೦ ರೂ. ಕನಿಷ್ಠ ಬೆಲೆ ನಿಗದಿಪಡಿಸಿದ್ದರೂ, ಆಮದು ಸುಂಕ ಸೇರಿದಂತೆ ಎಲ್ಲಾ ಸುಂಕ ಭರಿಸಿದ ನಂತರವೂ ವಿದೇಶಿ ಕಾಳುಮೆಣಸು ದೇಶೀಯ ಉತ್ಪನ್ನಕ್ಕಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾಗಿ ಸಹಜವಾಗಿ ಖರೀದಿದಾರರು ಕಡಿಮೆ ಬೆಲೆಯ ಸರಕುಗಳತ್ತ ಆಸಕ್ತರಾಗುತ್ತಿದ್ದಾರೆ.
ಕರಿಮೆಣಸು ಹೆಚ್ಚು ಉತ್ಪಾದನೆ ಮಾಡುವ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಈ ಬಾರಿ ಉತ್ತಮ ಫಸಲು ಬಂದಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಫಸಲು ಮಾರುಕಟ್ಟೆೆಗೆ ಬರಲಾರಂಭಿಸಿದರೆ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಿಮೆಣಸು ಬೆಳೆಯುವ ಪ್ರದೇಶ ವಿಸ್ತರಣೆ ಆಗುತ್ತಿದ್ದು, ಈ ಹಂಗಾಮಿನಲ್ಲಿ ಅಲ್ಲಿಯ ಕರಿಮೆಣಸು ಕೂಡ ಹೆಚ್ಚಿನ ಪ್ರಮಾಣದಲ್ಲಿ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡುವ ಬಗ್ಗೆ ವ್ಯಾಪಾರಿ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ.
ಸ್ಥಳೀಯ ಫಸಲು ಮಾರುಕಟ್ಟೆಗೆ ಬರುವ ಮೊದಲೇ ಈ ಸ್ಥಿತಿ ಆದರೆ ಮುಂದೆ ಇನ್ನೇನಾಗಬಹುದು ಎನ್ನುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕರಿಮೆಣಸು ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕು. ಈ ಮೂಲಕ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರೀಕರಣಕ್ಕೆ ಒತ್ತು ಕೊಟ್ಟು ದೇಶೀಯ ಬೆಳೆಗಾರರ ಹಿತಕಾಯಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ಕಳೆದ ಎರಡು ವರ್ಷಗಳಿಂದ ಕರಿಮೆಣಸಿನ ದರ ಕಿಲೋ ಒಂದಕ್ಕೆ ೪೮೦ರಿಂದ ೫೦೦ ರೂ. ವರೆಗೆ ಇತ್ತು. ಅಕ್ಟೊಬರ್ ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಕೆಜಿಗೆ ೫೩೦ ರಿಂದ ೬೦೦ ರೂ. ತನಕ ಏರಿಕೆಯಾಗಿತ್ತು. ನಂತರ ಈ ಬೆಲೆಯ ಆಸುಪಾಸಿನಲ್ಲಿ ಸ್ಥಿರವಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತಷ್ಟು ಕುಸಿದ ಕಾರಣ ಬೆಲೆ ಮತ್ತಷ್ಟು ಇಳಿತದತ್ತ ಸಾಗುತ್ತಿದ್ದು, ಸದ್ಯ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಹೊಸ ಕರಿಮೆಣಸಿಗೆ ೫೩೦ ರೂ. ದರದಲ್ಲಿ ಖರೀದಿಯಾಗುತ್ತಿದೆ.
ಸಿಯಾಬ್, ಕರಿಮೆಣಸು ವ್ಯಾಪಾರಿ, ಸಿದ್ದಾಪುರ