ಮಡಿಕೇರಿ:
ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಹಳ್ಳಿ ಗ್ರಾಮಕ್ಕೆ ಸ್ಮಶಾನ ಇಲ್ಲದಂತಾಗಿದೆ. ಇಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲದಂತಹ ಪರಿಸ್ಥಿತಿ ಎದುರಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ತಲೆತಲಾಂತರದಿಂದ ಊರಿಗಾಗಿ ಬಳಕೆ ಆಗುತ್ತಿದ್ದ ರುದ್ರಭೂಮಿ ಕೈ ತಪ್ಪಿ ಹೋಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿದೆ.
ಜಿಲ್ಲೆಯಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಹೆಗ್ಗಳಿಕೆಯ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಸೇರುವ ಮೊದಲನೇ ಬ್ಲಾಕ್ ೧೨ನೇ ವಾರ್ಡ್‌ನ ಬೈಚನಹಳ್ಳಿಯಲ್ಲಿ ಸುಮಾರು ೩ ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿಯ ನಿವಾಸಿಗಳು ಬಹಳ ಹಿಂದಿನಿಂದಲೂ ಸ್ಮಶಾನಕ್ಕಾಗಿ ಕುಶಾಲನಗರ ತಾಲೂಕು, ಕುಶಾಲನಗರ ಹೋಬಳಿ ಬೈಚನಹಳ್ಳಿ ಗ್ರಾಮದ ಸರ್ವೇ ನಂ.೨/೧ರಲ್ಲಿ ಬರುವ ಪೈಸಾರಿ ಜಾಗವನ್ನು ಬಳಕೆ ಮಾಡುತ್ತಾ ಬಂದಿದ್ದರು. ’ನಮ್ಮ ಗ್ರಾಮದಲ್ಲಿ ಯಾರು ಸತ್ತರೂ ಇಲ್ಲೇಯೇ ಮಣ್ಣು ಮಾಡುತ್ತಿದ್ದೆವು,’ ಎನ್ನುತ್ತಾರೆ ಸ್ಥಳೀಯರು. ಆದರೆ ೩ ದಿನಗಳ ಹಿಂದೆ ಈ ಜಾಗವನ್ನು ಸಮುದಾಯವೊಂದಕ್ಕೆ ಸೇರಿದ ಸ್ಮಶಾನ ಎಂದು ಕಂದಾಯ ಇಲಾಖೆ ಸಿಬ್ಬಂದಿ ಗುರುತಿಸಿಕೊಟ್ಟಿದ್ದು, ಆ ಸಮುದಾಯದವರು ಇಲ್ಲಿ ಇದು ನಮ್ಮ ಸಮುದಾಯಕ್ಕೆ ಸೇರಿದ ಸ್ಮಶಾನ ಎನ್ನುವ ನಾಮಫಲಕವನ್ನೂ ಹಾಕಿಬಿಟ್ಟಿದ್ದರು.
ಕುಶಾಲನಗರ ಪುರಸಭೆಯ ವಾರ್ಡ್ ನಂ.೧೫ರಲ್ಲಿರುವ ಬೈಚನಹಳ್ಳಿ ಗ್ರಾಮದ ಸರ್ವೇ ನಂ.೨/೧ರ ಈ ಜಾಗವನ್ನು ಗ್ರಾಮದ ಎಲ್ಲಾ ಸಮುದಾಯದವರೂ ಯಾವುದೇ ಜಾತಿ ಭೇದ ಇಲ್ಲದೆ ಬಹಳ ಹಿಂದಿನಿಂದಲೂ ಬಳಸಿಕೊಂಡು ಬರುತ್ತಿದ್ದರು. ಆದರೆ ಈಗ ಏಕಾಏಕಿ ಸಮುದಾಯ ಒಂದಕ್ಕೆ ಈ ಜಾಗವನ್ನು ಗುರುತಿಸಿಕೊಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆ ಸಮುದಾಯಕ್ಕೆ ಪ್ರತ್ಯೇಕವಾಗಿ ಸ್ಮಶಾನ ಕೊಟ್ಟಿರುವುದನ್ನು ಸ್ಥಳೀಯರು ವಿರೋಧ ಮಾಡುತ್ತಿಲ್ಲ. ಆದರೆ ಸರ್ವಜನಾಂಗದವರು ಬಳಸುತ್ತಿದ್ದ ಸ್ಮಶಾನವನ್ನು ನಿರ್ದಿಷ್ಟ ಸಮುದಾಯಕ್ಕೆಂದು ಮೀಸಲಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಮತ್ತೊಂದು ಕಡೆ ಕಂದಾಯ ಅಧಿಕಾರಿಗಳು ತಾವು ಕಾನೂನುಬದ್ಧವಾಗಿ ನಿಗದಿತ ಸಮುದಾಯಕ್ಕೆ ಸ್ಮಶಾನ ಜಾಗ ಗುರುತಿಸಿಕೊಟ್ಟಿರುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಕುಶಾಲನಗರ ಪುರಸಭೆಯ ವಾರ್ಡ್ ನಂ.೧೫ರಲ್ಲಿರುವ ಬೈಚನಹಳ್ಳಿ ಗ್ರಾಮದ ಸರ್ವೇ ನಂ.೨/೧ರಲ್ಲಿ ೨೩ ಸೆಂಟ್ ಜಾಗವನ್ನು ಸರ್ಕಾರ ೨೦೦೫ರ ಮೇ ೧೨ಕ್ಕೆ ಆ ಸಮುದಾಯಕ್ಕೆ ಮಂಜೂರು ಮಾಡಿಕೊಟ್ಟಿದೆ. ಹಾಗಾಗಿ ಈಗ ಅವರ ಮನವಿ ಮೇರೆಗೆ ಅಲ್ಲಿ ೨೩ ಸೆಂಟ್ ಜಾಗವನ್ನು ಗುರುತಿಸಿಕೊಡಲಾಗಿದೆ ಎನ್ನುತ್ತಾರೆ.
ಕಂದಾಯ ಇಲಾಖೆ ಸಿಬ್ಬಂದಿ ಜಾಗ ಗುರುತಿಸಿಕೊಡುತ್ತಿದ್ದಂತೆಯೇ ತಮಗೆ ಸಿಕ್ಕಿದ ಸ್ಮಶಾಸನ ಜಾಗಕ್ಕೆ ’ಇದು ಇಂಥ ಸಮುದಾಯದ ಸ್ಮಶಾನ’ ಎಂದು ಆ ಸಮುದಾಯದವರು ನಾಮಫಲಕ ಹಾಕಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯ ಕೆಲವರು ಈ ನಾಮಫಲಕ ಕಿತ್ತು ಹಾಕಿದ್ದಾರೆ. ವಿಷಯ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಬೇಕಾದರೂ ಸಂಘರ್ಷದ ವಾತಾವರಣ ನಿರ್ಮಾಣ ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಸ್ಮಶಾನ ಊರಿನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿ ಡಾ. ಸತೀಶ್ ಅವರು ವ್ಯಯಕ್ತಿಕ ಆಸಕ್ತಿ ವಹಿಸಿ ಪ್ರತಿ ಊರಿಗೂ ಸ್ಮಶಾನ ಮಂಜೂರು ಮಾಡಿಕೊಟ್ಟಿದ್ದರು. ಜಿಲ್ಲೆಯಲ್ಲಿ ಎಲ್ಲಿಯೂ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಇಲ್ಲ ಎನ್ನುವ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಪ್ರಥಮ ಆದ್ಯತೆಯಲ್ಲಿ ಪ್ರತಿ ಊರುಗಳಿಗೂ ಸ್ಮಶಾನದ ಜಾಗ ಗುರುತಿಸಿಕೊಟ್ಟಿದ್ದರು. ಆದರೆ ಬೈಚನಹಳ್ಳಿಯಲ್ಲಿ ಮಾತ್ರ ೨೦೦೫ರಲ್ಲೇ ಸಮುದಾಯವೊಂದಕ್ಕೆ ಸ್ಮಶಾನ ಜಾಗ ಮಂಜೂರಾಗಿದ್ದರೂ ಈಗ ಸಾರ್ವಜನಿಕ ಸ್ಮಶಾನದಲ್ಲಿ ಜಾಗ ಗುರುತಿಸಿಕೊಟ್ಟು ಉಳಿದ ಸಮುದಾಯದವರನ್ನು ಅತಂತ್ರ ಪರಿಸ್ಥಿತಿಗೆ ದೂಡಿದ್ದಾರೆ.
ಸ್ಥಳೀಯರು ಈಗಾಗಲೇ ವಿಷಯವನ್ನು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಯಾವುದೇ ಜಾಗ ಇಲ್ಲ ಎನ್ನುವ ಆತಂಕವನ್ನೂ ತೋಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳಿಂದ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ಮಂಜೂರು ಮಾಡುವಂತೆ ಆಗ್ರಹಿಸಿ ಬೈಚನಹಳ್ಳಿ ಗ್ರಾಮಸ್ಥರು ತಮ್ಮ ವ್ಯಾಪ್ತಿಯ ಪುರಸಭೆ ಸದಸ್ಯ ಬಿ.ಎಲ್. ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸ್ಮಶಾನ ಜಾಗ ಸಿಗುವ ತನಕವೂ ಆಮರಣಾಂತ ಉಪವಾಸ ನಡೆಸುವ ಬಗ್ಗೆಯೂ ಚಿಂತನೆ ನಡೆಸಿರುವುದಾಗಿ ಸ್ಥಳೀಯರು ವಿಜಯವಾಣಿಗೆ ತಿಳಿಸಿದ್ದಾರೆ.
ಬೈಚನಹಳ್ಳಿ ಗ್ರಾಮಸ್ಥರು ಈ ಸ್ಮಶಾನವನ್ನು ಬಹಳ ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬಂದಿದ್ದೇವೆ. ಇದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ಸ್ಮಶಾನ ಅಲ್ಲ. ಎಲ್ಲ ಜಾತಿಯವರು ಸತ್ತಾಗಲೂ ಇಲ್ಲಿಯೇ ಮಣ್ಣು ಮಾಡುತ್ತಿದ್ದೆವು. ಆದರೆ ಈಗ ಕಂದಾಯ ಇಲಾಖೆ ಸಿಬ್ಬಂದಿ ನಿರ್ದಿಷ್ಟ ಸಮುದಾಯಕ್ಕೆಂದು ಗುರುತು ಮಾಡಿಕೊಟ್ಟಿರುವುದು ಸರಿಯಲ್ಲ. ಅವರಿಗೆ ಸ್ಮಶಾನ ಕೊಟ್ಟಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಈಗ ನಮ್ಮ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಎಲ್ಲಿ ನಡೆಸುವುದು ಎನ್ನುವ ಪ್ರಶ್ನೆಗೆ ಕಂದಾಯ ಇಲಾಖೆ ಅಧಿಕಾರಿಗಳೇ ಉತ್ತರ ಕೊಡಬೇಕು.
ಬಿ.ಎಲ್. ಜಗದೀಶ್, ಪುರಸಭೆ ಸದಸ್ಯ, ಕುಶಾಲನಗರ
ಕುಶಾಲನಗರ ಪುರಸಭೆಯ ವಾರ್ಡ್ ನಂ.೧೫ರಲ್ಲಿರುವ ಬೈಚನಹಳ್ಳಿ ಗ್ರಾಮದ ಸರ್ವೇ ನಂ.೨/೧ರ ಈ ಪೈಸಾರಿ ಜಾಗದಲ್ಲಿ ೨೩ ಸೆಂಟ್ ಸ್ಥಳ ನಿರ್ದಿಷ್ಟ ಸಮುದಾಯವೊಂದಕ್ಕೆ ಸ್ಮಶಾನ ಉದ್ದೇಶಕ್ಕೆ ೨೦೦೫ರಲ್ಲೇ ಸರ್ಕಾರ ಮಂಜೂರು ಮಾಡಿದೆ. ಆರ್‌ಟಿಸಿಯಲ್ಲಿ ಆ ಸಮುದಾಯದ ಹೆಸರು ನಮೂದಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಗ ಗುರುತಿಸಿಕೊಡಲಾಗಿದೆ. ಅಲ್ಲಿ ಇತರರಿಗೆ ಸ್ಮಶಾನ ಇಲ್ಲವೆಂದಾದರೆ ಸ್ಥಳೀಯರು ಅಥವಾ ಪುರಸಭೆ ಮುಖಾಂತರ ಮನವಿ ಬಂದರೆ ಸರ್ಕಾರಿ ಜಾಗ ಗುರುತಿಸಿ ಸ್ಮಶಾನ ನೀಡಲಾಗುವುದು.
ಕಿರಣ್ ಗೌರಯ್ಯ, ತಹಸೀಲ್ದಾರ್, ಕುಶಾಲನಗರ ತಾಲೂಕು
ಬೈಚನಹಳ್ಳಿ ಸ್ಮಶಾನ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಸ್ಮಶಾನಕ್ಕೆ ಜಾಗ ಗುರುತಿಸಿಕೊಡುವುದು ಕಂದಾಯ ಇಲಾಖೆ ಜವಾಬ್ದಾರಿ. ಅವರು ಜಾಗ ಗುರುತಿಸಿಕೊಟ್ಟರೆ ನಮ್ಮ ಕಡೆಯಿಂದ ಅಭಿವೃದ್ಧಿ ಕೆಲಸ ಮಾಡಲಾಗುವುದು. ಸ್ಮಶಾನಕ್ಕೆ ಬೇಲಿ. ವಿದ್ಯುತ್ ದೀಪದ ವ್ಯವಸ್ಥೆ ಮಾಡಿಕೊಡಲಾಗುವುದು.
ಕೃಷ್ಣಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ