ಹರಿಪ್ರಸಾದ್ ನಂದಳಿಕೆ ಕಾರ್ಕಳ
ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಗಾಗಿ ಸಾಣೂರಿನಲ್ಲಿ ಗುಡ್ಡ ಅಗೆದು ತಡೆಗೋಡೆ ನಿರ್ಮಿಸದಿರುವುದುರಿಂದ ಗುಡ್ಡದ ಮಣ್ಣು ಪದೇಪದೆ ಕುಸಿತವಾಗುತ್ತಿದ್ದು, ವಿದ್ಯುತ್ ಟವರ್ ಧರೆಗೆ ಬೀಳುವ ಅಪಾಯ ಎದುರಾಗಿದೆ.
ಗುಡ್ಡದ ಮೇಲ್ಭಾಗದಲ್ಲಿರುವ 220 ಕೆವಿ ಹೈಟೆನ್ಷನ್ ವಿದ್ಯುತ್ ಗೋಪುರ ಹಾಗೂ ನೀರಿನ ಟ್ಯಾಂಕ್‌ಗೆ ಅಪಾಯ ಹೆಚ್ಚಾಗುತ್ತಿದೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಾಸಕರು ಮತ್ತು ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ವಾರದೊಳಗೆ ಕಾಮಗಾರಿ ಪ್ರಾರಂಭಿಸಿ ಮೂರು ತಿಂಗಳೊಳಗೆ ತಡೆಗೋಡೆ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಗುಡ್ಡ ಜರಿದ ಸ್ಥಳಕ್ಕೆ ಟಾರ್ಪಾಲು ಹೊದಿಕೆ ಅಳವಡಿಸಿದ್ದು ಹೊರತುಪಡಿಸಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಸಾಣೂರು ಯುವಕ ಮಂಡಲ ಸಮೀಪದ ಹೈಟೆನ್ಷನ್ ವಿದ್ಯುತ್ ಗೋಪುರದ ಬಳಿ ಗುಡ್ಡೆ ಕುಸಿಯುತ್ತಲೇ ಇದ್ದು, ಮುಂಜಾಗ್ರತಾ ಕ್ರಮವಾಗಿ ಸಾಣೂರು ಮುರತ್ತಂಗಡಿ ಬಳಿ ಹಾಗೂ ಸಾಣೂರು ಯುವಕ ಮಂಡಲ ಬಳಿ ಕಾರ್ಕಳ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಷೇಧಿಸಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಪತ್ರ ಬರೆದಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಭಿವೃದ್ಧಿ ಕಾರ್ಯ 2 ವರ್ಷಗಳಿಂದ ನಡೆಯುತ್ತಿದ್ದು, ಸದರಿ ರಸ್ತೆ ಅಭಿವೃದ್ಧಿ ವೇಳೆ ಸಾಣೂರು ಯುವಕ ಮಂಡಲ ಸಮೀಪವಿರುವ ವಿದ್ಯುತ್‌ಲೈನ್ ಟವರ್ ಪಕ್ಕದ ಗುಡ್ಡ ಅಗೆದಿರುವುದರಿಂದ ರಸ್ತೆ ಬದಿಯ ಪಾರ್ಶ್ವವು ಕುಸಿದಿದ್ದು, ಜತೆಗೆ ಟವರ್‌ನ ಸಮೀಪದ ತನಕ ಕುಸಿತ ವ್ಯಾಪಿಸಿದೆ. ಇದರಿಂದ ವಿದ್ಯುತ್ ಟವರ್ ಉರುಳಿ ಅಪಾರ ಜೀವ, ಆಸ್ತಿ ಹಾನಿಯಾಗುವ ಸಂಭವವಿದೆ. ಇದಕ್ಕಾಗಿ ತಡೆಗೋಡೆ ನಿರ್ಮಾಣ ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ಗುಡ್ಡ ಕುಸಿದು ವಿದ್ಯುತ್ ಗೋಪುರ ಕುಸಿಯುವ ಸಾಧ್ಯತೆಯಿದೆ ಎಂದು ಕೆಲವು ತಿಂಗಳ ಹಿಂದೆ ವಿಜಯವಾಣಿ ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು. ಜಿಲ್ಲಾಧಿಕಾರಿ, ಶಾಸಕ ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸೂಚನೆಗಳನ್ನು ನೀಡಿದ್ದರು. ಆದರೂ ಗುತ್ತಿಗೆದಾರರು ಬೇಜವಾಬ್ದಾರಿ ತೋರಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ಹಲವು ಬಾರಿ ಸಮಸ್ಯೆಗಳ ಬಗ್ಗೆ ಮನವಿ ನೀಡಿದ್ದರೂ ಪ್ರಯೋಜನ ಶೂನ್ಯ. ವಿದ್ಯುತ್ ಗೋಪುರ ಕುಸಿದು ಅನಾಹುತವಾದರೆ ಜಿಲ್ಲಾಧಿಕಾರಿ, ಜನಪ್ರತಿನಿಧಿ, ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಮುಂಜಾಗ್ರತೆಗಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ.-ಸಾಣೂರು ನರಸಿಂಹ ಕಾಮತ್, ರಾಷ್ಟ್ರೀಯ ಹೆದ್ದಾರಿ ಭೂಮಾಲೀಕರ ಹೋರಾಟ ಸಮಿತಿಯ ಪ್ರಮುಖರು
ಈಗಾಗಲೇ ಕಾಮಗಾರಿ ಆರಂಭಿಸಬೇಕಾಗಿತ್ತು. ವಿಪರೀತ ಮಳೆಯ ಕಾರಣ ವಿಳಂಬವಾಗಿದೆ. ಅಧಿಕಾರಿಗಳ ಜತೆ ಸಭೆಯನ್ನು ನಡೆಸಿದ್ದೇವೆ. ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಬ್ಯಾರಿಕೇಡ್ ಅಳವಡಿಸಲಾಗಿದ್ದು. ಕಾಮಗಾರಿಯು ಕೂಡಲೇ ಆರಂಭಗೊಳ್ಳುತ್ತದೆ.ಡಾ.ವಿದ್ಯಾಕುಮಾರಿ ಉಡುಪಿ ಜಿಲ್ಲಾಧಿಕಾರಿ