ನಾಪೋಕ್ಲು: ನಲ್ಲಿನ ಗ್ರಾಮ ಪಂಚಾಯಿತಿ ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾವ್ಯವನ್ನು ಸಮೀಪದ ಚೆರಿಯ ಪರಂಬುವಿನ ಕಾವೇರಿ ನದಿ ದಡದಲ್ಲಿ ಸುರಿಯಲಾಗುತ್ತಿದ್ದು, ಇದರಿಂದ ದುರ್ನಾತ ಬರುತ್ತಿರುವುದಲ್ಲದೆ, ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ತ್ಯಾಜ್ಯಗಳನೆಲ್ಲ ಸಂಗ್ರಹಿಸಿ ಹಲವು ವರ್ಷಗಳಿಂದ ಕಾವೇರಿ ನದಿ ದಡದಲ್ಲಿ ತಂದು ಸುರಿಯಲಾಗುತ್ತಿದೆ. ಇದರಿಂದ ಇಡೀ ವಾತಾವರಣ ಕಲುಷಿತವಾಗುತ್ತಿದೆ. ಇದೇ ಪರಿಸರದಲ್ಲಿ ಸುಮಾರು 150 ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಹೆಚ್ಚಿನ ಜನಸಂಖ್ಯೆ ಇದೆ. ಪಕ್ಕದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ನದಿಯ ದಡದಲ್ಲಿ ಗ್ರಾಮದ ತ್ಯಾಜ್ಯಗಳನೆಲ್ಲ ತಂದು ಸುರಿಯಲಾಗುತ್ತಿದೆ. ಕಸ ವಿಲೇವಾರಿಗೆ ಸೂಕ್ತ ತಾಣ ಸಿಗುತ್ತಿಲ್ಲವೇ? ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ನದಿ ತಟದಲ್ಲಿ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಜಾನುವಾರು, ನಾಯಿ, ಪಕ್ಷಿಗಳು ತಮ್ಮ ಆಹಾರವನ್ನು ತ್ಯಾಜ್ಯದ ಸ್ಥಳವನ್ನೇ ತಮ್ಮ ಆಹಾರ ಹುಡುಕುತ್ತಿರುವುದರಿಂದ ಅವುಗಳ ಜೀವಕ್ಕೂ ಕುತ್ತು ಬರುವಂತಾಗಿದೆ. ಈಗ ಸುರಿದ ಮಳೆಗೆ ತ್ಯಾಜ್ಯ ಹರಿದು ಕಾವೇರಿ ಒಡಲು ಸೇರುತ್ತಿದ್ದು, ಇದೇ ನೀರನ್ನು ಶುದ್ಧೀಕರಿಸದೆ ನೇರವಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಹೆಚ್ಚಿಸಿದೆ.
ತಲಕಾವೇರಿಯಲ್ಲಿ ಹುಟ್ಟಿ ಭಾಗಮಂಡಲದ ಮೂಲಕ ಹಾದು ಹೋಗುವ ಕಾವೇರಿ ಹಲವಾರು ತಾಣಗಳಲ್ಲಿ ತ್ಯಾಜ್ಯಗಳನ್ನು ಒಳಗೊಂಡು ಮಲಿನವಾಗುತ್ತಿದೆ. ಇದಕ್ಕೆ ಮತ್ತಷ್ಟು ಸೇರ್ಪಡೆ ಚರಿಯ ಪರಂಬುವಿನ ತ್ಯಾಜ್ಯ. ಹೀಗಾಗಿ ಕಾವೇರಿ ನದಿ ಮತ್ತಷ್ಟು ಮಲಿನವಾಗಲು ಇಲ್ಲಿನ ತ್ಯಾಜ್ಯ ಪ್ರಮುಖ ಕಾರಣವಾಗುತ್ತಿದೆ.
ಗ್ರಾಮಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳಯ ಇತ್ತ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.