ಜಿಲ್ಲೆ

ಮಳೆ ನಿಂತರೂ ನಿಲ್ಲದ ಆತಂಕ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಿಗೆ ಸೂಚನೆ

ಬೆಂಗಳೂರು: ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಆರ್ಭಟ ಕೊಂಚ ತಗ್ಗಿದೆಯಾದರೂ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ನದಿ ಪಾತ್ರದ ಜಿಲ್ಲೆಗಳಲ್ಲಿ ಆತಂಕ ಮುಂದುವರಿದಿದೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೊರಬಿಡುತ್ತಿರುವ ಅಪಾರ ಪ್ರಮಾಣದ ನೀರು ಪ್ರವಾಹ ಆತಂಕ ತಂದಿಟ್ಟಿದ್ದು, ಬೆಳಗಾವಿ ಜಿಲ್ಲೆಯ 80ಕ್ಕೂ ಹೆಚ್ಚಿನ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕೋಡಿಯಲ್ಲಿ 8 ಸೇತುವೆ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ 130ಕ್ಕೂ ಅಧಿಕ ಮನೆ ಕುಸಿದಿವೆ. ಕಬ್ಬು, ಭತ್ತ, ಶೇಂಗಾ, ಮೆಕ್ಕೆಜೋಳ, ಹೆಸರು ಸೇರಿ ಸಾವಿರಾರು ಹೆಕ್ಟೇರ್ ಕೃಷಿ ಬೆಳೆಗಳು ಜಲಾವೃತಗೊಂಡಿವೆ.

ಪುರಂದರಮಂಟಪ ಜಲಾವೃತ

ಹೊಸಪೇಟೆ (ಬಳ್ಳಾರಿ): ತುಂಗಭದ್ರಾ ಡ್ಯಾಂನಿಂದ 54,474 ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಹಂಪಿಯ ಪುರಂದರದಾಸರ ಮಂಟಪ ಮಂಗಳವಾರ ಜಲಾವೃತವಾಗಿದೆ. ನದಿ ತೀರದಲ್ಲಿರುವ ಚಕ್ರತೀರ್ಥದ ಬಳಿ ನೂರೆಂಟು ಶಿವಲಿಂಗ, ನಂದಿ, ಸಾಲು ಕಂಬ, ಮಂಟಪಗಳು ಮುಳುಗಿವೆ. ತಾಲೂಕಿನ ಇಪ್ಪಿತೇರಿ ಗ್ರಾಮ ಸಮೀಪದ ಜಹಗೀರ್​ದಾರ್ ಬಂಡೆ ನಡುಗಡ್ಡೆಯಲ್ಲಿ ಸಿಲುಕಿದ್ದ 15 ಕರಿಕೋತಿಗಳನ್ನು ಮಂಗಳವಾರ ರಕ್ಷಿಸಲಾಗಿದೆ. ಹೆಚ್ಚುವರಿ ನೀರು ಬಿಟ್ಟಿದ್ದರಿಂದ ಈ ಕೋತಿಗಳು ದಡಕ್ಕೆ ಬರಲಾಗದೆ ನಡುಗಡ್ಡೆಯಲ್ಲೇ ಸಿಲುಕಿದ್ದವು.

ಈಜಿ ದಡ ಸೇರಿದ ಶ್ವಾನ

ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಮಲಪ್ರಭಾ ಸೇತುವೆಗೆ ನಿರ್ವಿುಸಿದ್ದ ತಾತ್ಕಾಲಿಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಆಹಾರ ಸಿಗದೆ ಕಂಗೆಟ್ಟಿದ್ದ ನಾಯಿಯೊಂದು ನದಿ ನೀರು ಕುಡಿಯಲು ಹೋದಾಗ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಬರುತ್ತಿರುವ ದೃಶ್ಯ ಕೊಣ್ಣೂರ ಸೇತುವೆ ಬಳಿ ಕಂಡು ಬಂತು. ನಾಯಿ ಚಾಣಾಕ್ಷತನದಿಂದ ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದೆ.

ಬರ್ತ್​ಡೇ ಆಚರಿಸಿಕೊಂಡ 3 ದಿನಕ್ಕೆ ಸಾವು

ಬಟ್ಟೆ ತೊಳೆಯಲು ಹೋದಾಗ ಕುಮದ್ವತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಯುವತಿ ಶಶಿಕಲಾ ಶಿವಪ್ಪ ಮಾಳಿಗೇರ (19) ಪತ್ತೆಗಾಗಿ ಮಂಗಳವಾರವೂ ಕಾರ್ಯಾಚರಣೆ ಮುಂದುವರಿಯಿತು. ಶಶಿಕಲಾ ಆ.15ರಂದು ಜನ್ಮದಿನ ಆಚರಿಸಿಕೊಂಡಿದ್ದಳು. ಇರುವ ಒಬ್ಬ ಮಗ, ಒಬ್ಬ ಮಗಳಿಗೆ ಮುಂದಿನ ವರ್ಷವೇ ಮದುವೆ ಮಾಡುವ ಕನಸು ಕಂಡಿದ್ದೆವು. ಆದರೀಗ ಕುಮದ್ವತಿ ನಮ್ಮ ನೆಮ್ಮದಿಯನ್ನೇ ಕಸಿದುಕೊಂಡಿದೆ ಎಂದು ಶಶಿಕಲಾ ತಂದೆ-ತಾಯಿ ಕಣ್ಣೀರಿಟ್ಟರು.

ಮಲೆನಾಡಿನಲ್ಲಿ ಭೂ ಕುಸಿತದ ಆತಂಕ

ಮಲೆನಾಡಿನಲ್ಲಿ ಮಘೆ ಮಳೆಯ ರಭಸ ಮಂಗಳವಾರ ತಗ್ಗಿದ್ದು, ಸೂರ್ಯನ ದರ್ಶನವಾಗಿದೆ. ಆದರೆ ಅನೇಕ ಕಡೆ ಭೂ ಕುಸಿತ ಉಂಟಾಗಿ ಜನರು ಭಯಗೊಳ್ಳುವಂತಾಗಿದೆ. ಸಾಗರ ತಾಲೂಕಿನ ನಂದೋಡಿ ಊರಿನ ಮೇಲ್ಭಾಗದ ಗುಡ್ಡದಲ್ಲಿ ಬಿರುಕು ಮೂಡಿದ್ದರಿಂದ ಊರಿಗೆ ಊರೇ ಭಯದಲ್ಲಿದೆ. ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಹಾಗೂ ರಾಜ್ಯ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರೂ ಆದ ಅನಂತ ಹೆಗಡೆ ಅಶೀಸರ, ಹವಾಮಾನ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮತ್ತಿತರರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಬಿರುಕು ಬಿಟ್ಟಿರುವ ಪ್ರದೇಶಗಳು ಬಲು ಅಪಾಯಕಾರಿಯಾಗಿದ್ದು, ಹತ್ತು ದಿನಗಳೊಳಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಶೀಸರ ತಿಳಿಸಿದರು.

ಜಲಾವೃತ ಮನೆಯಲ್ಲೇ ರಾತ್ರಿ ಕಳೆದ ವೃದ್ಧೆ ಶಿವನವ್ವ

ಇಡೀ ಗ್ರಾಮವನ್ನೇ ಆಪೋಶನ ತೆಗೆದುಕೊಳ್ಳುವಂತೆ ಮಲಪ್ರಭೆ ನೀರು ನುಗ್ಗುತ್ತಿದ್ದರೂ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಜಾಡರ ಓಣಿಯ 85 ವರ್ಷದ ಶಿವನವ್ವ ವಾಲಿ ಮನೆ ಬಿಟ್ಟು ಹೋಗುವುದಿಲ್ಲವೆಂದು ಇಡೀ ರಾತ್ರಿ ಹಠ ಹಿಡಿದು ಕುಳಿತಿದ್ದಳು. ವರ್ಷಪೂರ್ತಿ ದುಡಿದು ಕಟ್ಟಿಕೊಂಡ ಬದುಕನ್ನು ಪ್ರತಿವರ್ಷ ಬರುವ ಪ್ರವಾಹ ಕೊಚ್ಚಿಕೊಂಡು ಹೋಗುತ್ತದೆ. ಅನೇಕ ವರ್ಷಗಳಿಂದ ಇಂತಹದ್ದೇ ಪರಿಸ್ಥಿತಿ ಇದ್ದರೂ ಸರ್ಕಾರ, ಅಧಿಕಾರಿಗಳು ಮಾತ್ರ ಕಣ್ತೆರೆಯುವುದಿಲ್ಲ ಎಂದು ವೃದ್ಧೆ ಕಣ್ಣೀರಿಟ್ಟರು. ಸ್ಥಳಕ್ಕೆ ಅಧಿಕಾರಿಗಳ ದಂಡೇ ಧಾವಿಸಿತು. ಮನೆಬಾಗಿಲಿಗೆ ಬಂದ ಜಿಪಂ ಅಧ್ಯಕ್ಷರ ಕಾಲಿಗೆ ಬಿದ್ದು ಇಡೀ ಗ್ರಾಮಸ್ಥರ ನರಕಯಾತನೆ ತಪ್ಪಬೇಕು ಎಂದು ಗೋಗರೆದಳು. ಕೊನೆಗೆ ಪರಿಹಾರ ಒದಗಿಸುವ ಭರವಸೆ ನೀಡಿ ವೃದ್ಧೆಯ ಮನವೊಲಿಸಲಾಯಿತು.

ಜನರ ಬದುಕು ನುಚ್ಚುನೂರು

ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳ ಜನರು ನೆರೆ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ನೆರೆಯಿಂದ ಪರದಾಡಿದ ಜನರ ಬದುಕು ತುಸು ಸುಧಾರಿಸಿಕೊಳ್ಳುವ ಮುನ್ನವೇ ಮತ್ತೊಮ್ಮೆ ನೆರೆ ವಕ್ಕರಿಸಿದ್ದು ಆಘಾತ ಮೂಡಿಸಿದೆ. ನರಗುಂದ ತಾಲೂಕಿನ ಲಖಮಾಪುರ, ಬೂದಿಹಾಳ ಮತ್ತು ಕೊಣ್ಣೂರು ಗ್ರಾಮದಲ್ಲಿ ನೀರು ನುಗ್ಗಿದೆ.

ಮುಂದುವರಿದ ಶೋಧ ಕಾರ್ಯ

ತೆಲಂಗಾಣದ ಪಂಚದೇವಪಾಡು ಗ್ರಾಮ ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ ಸೋಮವಾರ ಸಂಜೆ ತೆಪ್ಪ ಮುಗುಚಿ ನಾಪತ್ತೆಯಾಗಿರುವ ನಾಲ್ವರಿಗಾಗಿ ಮಂಗಳವಾರ ದಿನವಿಡೀ ಶೋಧ ಕಾರ್ಯ ನಡೆಸಿದರೂ ಫಲ ನೀಡಲಿಲ್ಲ. ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆಯ 13 ಜನರು ಪಂಚದೇವಪಾಡು ಗ್ರಾಮದಿಂದ ಕುರ್ವಕಲಾ ನಡುಗಡ್ಡೆಗೆ ತೆಪ್ಪದಲ್ಲಿ ಬರುವಾಗ ಈ ಘಟನೆ ಜರುಗಿತ್ತು.

ಮಲಪ್ರಭಾ ರೌದ್ರನರ್ತನ

ಮಲಪ್ರಭಾ ನದಿ ಭೋರ್ಗರೆದು ಹರಿಯುತ್ತಿದ್ದು, ನದಿ ತಟದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಿವಿದ ಗ್ರಾಮಗಳಿಗೆ ನೀರು ನುಗ್ಗಿದ್ದು, ಜನತೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಅನುವಾಗುತ್ತಿದ್ದಾರೆ. ಶಿವಯೋಗ ಮಂದಿರದ ಸೇತುವೆ ಸೇರಿ 15ಕ್ಕೂ ಅಧಿಕ ಸೇತುವೆಗಳು ಜಲಾವೃತಗೊಂಡಿವೆ.

ಗಡ್ಡಿಯಿಂದ ನಾಲ್ವರ ರಕ್ಷಣೆ

ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆ ಪ್ರದೇಶದಲ್ಲಿ ಸಿಲುಕಿದ್ದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮ್ಯಾದರಗಡ್ಡಿಯ ನಾಲ್ವರನ್ನು ಕರೆ ತರಲಾಯಿತು. 10 ಮಂದಿ ಗಡ್ಡಿಯಲ್ಲೇ ಉಳಿದಿದ್ದಾರೆ.

ತಗ್ಗಿದ ಮಳೆ

ಉ.ಕನ್ನಡ, ಧಾರವಾಡ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದೆ. ಶರಾವತಿ ನದಿ ಪಾತ್ರದಲ್ಲಿ ಮಳೆಯಾಗುತ್ತಿದ್ದು, ಲಿಂಗನಮಕ್ಕಿಗೆ 42770 ಕ್ಯೂ. ನೀರು ಹರಿದುಬರುತ್ತಿದೆ. ಕಾಳಿ ಜಲವಿದ್ಯುತ್ ಯೋಜನೆಯ ಕದ್ರಾ ಅಣೆಕಟ್ಟೆಯಿಂದ ನೀರಿನ ಹೊರ ಹರಿವು ಮುಂದುವರಿದಿದೆ.