ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಿನ ಚಾರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾನಗರ ವಿನಾಯಕ ರೆಸಿಡೆನ್ಸಿ ಮುಂಭಾಗದಲ್ಲಿ ಸತತ ತ್ಯಾಜ್ಯ ಎಸೆಯಲಾಗುತ್ತಿದ್ದು, ಈ ಕುರಿತು ಪಂಚಾಯಿತಿ ವತಿಯಿಂದ ಎಡಬಿಡದ ಪ್ರಯತ್ನ ನಡೆದರೂ ಕಸ ಎಸೆಯುವವರನ್ನು ಪತ್ತೆ ಮಾಡಲಾಗುತ್ತಿಲ್ಲ. ನಿತ್ಯವೂ ಬೆಳಗ್ಗೆ ಅಥವಾ ರಾತ್ರಿ ಜನರ ಕಣ್ತಪ್ಪಿಸಿ ಬಂದು ನಿರ್ದಿಷ್ಟ ಜಾಗದಲ್ಲಿ ಮದ್ಯದ ಬಾಟಲಿ, ಮೊಟ್ಟೆ, ಹಳಸಿದ ಮಾಂಸ ಹಾಗೂ ಆಹಾರ ಪದಾರ್ಥಗಳ ಸಹಿತ ತ್ಯಾಜ್ಯ ಸುರಿಯಲಾಗುತ್ತಿದ್ದು, ದೊಡ್ಡಮಟ್ಟದಲ್ಲಿ ಕಸ ಸಂಗ್ರಹಗೊಂಡಿದೆ.
ಹೆದ್ದಾರಿ ಪಕ್ಕದಲ್ಲೇ ಚರಂಡಿ ಇದ್ದು, ರಸ್ತೆಯಲ್ಲಿ ಸುರಿದ ತ್ಯಾಜ್ಯಗಳು ಮಳೆ ಸುರಿದ ಸಂದರ್ಭ ಚರಂಡಿಯೊಳಗೆ ಸಿಕ್ಕಿಕೊಂಡು ಕೊಳಚೆಯಾಗುತ್ತಿದೆ. ಇದು ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಸಿದೆ.
ಕೆಲವು ದಿನಗಳಿಂದ ಕಸ ಎಸೆಯುವ ಪ್ರಮಾಣ ಗಣನೀಯ ಏರಿಕೆಯಾಗಿದ್ದು, ಸ್ವಚ್ಛತೆಯ ಕೊರತೆಯೂ ಎದುರಾಗಿದೆ. ಇವುಗಳು ಪರೋಕ್ಷವಾಗಿ ಪರಿಸರ ಮಾಲಿನ್ಯಕ್ಕೂ ಕಾರಣಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳದಲ್ಲಿ ಶೀಘ್ರವೇ ಸಿಸಿಟಿವಿ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಎಸೆಯಲಾಗುತ್ತಿರುವ ಮಾಂಸದ ತ್ಯಾಜ್ಯಗಳ ತಿನ್ನಲು ಬೀದಿನಾಯಿಗಳು ಹಿಂಡಾಗಿ ಬರುತ್ತಿದ್ದು, ಪಾದಚಾರಿಗಳಿಗೆ ಅಪಾಯವಾಗಿದೆ. ಆಹಾರ ತ್ಯಾಜ್ಯಗಳನ್ನು ಎಸೆಯುವ ಸಂದರ್ಭ ಜತೆಗೆ ಪ್ಲಾಸ್ಟಿಕ್ ಕೈಚೀಲಗಳನ್ನೂ ಎಸೆಯಲಾಗುತ್ತಿದ್ದು, ಹಸು, ಎಮ್ಮೆಗಳು ಇವುಗಳನ್ನು ಸೇವಿಸಿ ಆರೋಗ್ಯ ತೊಂದರೆಗೆ ಒಳಗಾಗುತ್ತಿವೆ. ಪ್ಲಾಸ್ಟಿಕ್ ಕೈ ಚೀಲ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.
ಅನೇಕ ಬಾರಿ ನಾನು ಇಲ್ಲಿ ಸುರಿದ ತ್ಯಾಜ್ಯವನ್ನು ಗೋಣಿಯೊಳಗೆ ತುಂಬಿ ಸ್ವಚ್ಛಗೊಳಿಸಿದ್ದೇನೆ. ಆದರೂ ಕಸ ಎಸೆಯುವುದು ಮಾತ್ರ ಹೆಚ್ಚುತ್ತಲೇ ಇದೆ. ಪಂಚಾಯಿತಿ ಗಮನಕ್ಕೂ ತರಲಾಗಿದ್ದು, ಅವರೂ ತುಂಬಾ ಪ್ರಯತ್ನಿಸಿದ್ದಾರೆ. ಪರಿಸರಕ್ಕೆ ಹಾನಿ ಮಾಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇನೆ.-ಪಾಪು ನಾಯ್ಕ ಸ್ಥಳೀಯ
ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಚಾರ ಗ್ರಾಮ ಪಂಚಾಯಿತಿಗೆ ತಿಳಿಸುತ್ತೇನೆ. ರಸ್ತೆ ಬದಿಯಲ್ಲಿ ರಾಜರೋಷವಾಗಿ ಸಾರ್ವಜನಿಕರು ಕಸ ಎಸೆಯುತ್ತಿರುವುದು ದೊಡ್ಡ ದುರಂತ. ಇದು ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡುತ್ತದೆ.-ಎಸ್.ಎ ಪ್ರಸಾದ್, ಹೆಬ್ರಿ ತಹಸೀಲ್ದಾರ್
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಬಗ್ಗೆ ಪದೇಪದೆ ಎಲ್ಲ ಮನೆಯವರಿಗೆ ಅರಿವು ನೀಡಿ ಎಚ್ಚರಿಸಿದ್ದರೂ ಜನ ಸುಧಾರಣೆ ಆಗುವುದು ಕಾಣಿಸುತ್ತಿಲ್ಲ. ಕಸ ಇರುವ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿದೆ. ಮುಂದೆ ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ.-ದಿನೇಶ್ ಶೆಟ್ಟಿ ಹುತ್ತುರ್ಕೆ, ಅಧ್ಯಕ್ಷ, ಚಾರ ಗ್ರಾಪಂ