ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ, ಅಡ್ಡ ಮತದಾನ, ಚುನಾವಣೆಯಿಂದ ದೂರ ಉಳಿಯುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದ 7 ನಗರಸಭಾ ಸದಸ್ಯರಿಗೆ ಅನರ್ಹತೆಯ ಭೀತಿ ಶುರುವಾಗಿದೆ.
ವಿಪ್ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು ನಗರಸಭೆ ಕಾಂಗ್ರೆಸ್ ಸದಸ್ಯ ದೀಪಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿರುವ ರಾಜ್ಯ ಉಚ್ಚ ನ್ಯಾಯಾಲಯ (ನ.26 ರಿಂದ ) ನಾಲ್ಕು ವಾರಗಳೊಳಗೆ ಅನರ್ಹತೆಯ ದೂರನ್ನು ನಿಯಮಾನುಸಾರ ಇತ್ಯರ್ಥಪಡಿಸಲು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ. ಅಧಿಕಾರಕ್ಕಾಗಿ ಕೈ ಕೊಟ್ಟು ಕಮಲ ಬೆಂಬಲಿಸಿ ಅನರ್ಹತೆಯ ತೂಗುಗತ್ತಿಯ ಕೆಳಗಿರುವ ಸದಸ್ಯರ ರಾಜಕೀಯ ಭವಿಷ್ಯ ಸದ್ಯದಲ್ಲೇ ಹೊರಬೀಳಲಿದೆ.
2020ರ ಅ.31 ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. 31 ಸದಸ್ಯಬಲದ ನಗರಸಭೆಯಲ್ಲಿ 16 ಸ್ಥಾನಗಳ ಮೂಲಕ ಸ್ಪಷ್ಟ ಬಹುಮತ ಹೊಂದಿದ್ದ ಕಾಂಗ್ರೆಸ್ ಗಾದಿ ಏರಲು ಸಿದ್ಧತೆ ನಡೆಸಿತ್ತು. ಅದರಂತೆ ಸದಸ್ಯರಿಗೆ ವಿಪ್ ಸಹ ನೀಡಿತ್ತು. ಆದರೆ 7 ಸದಸ್ಯರು ಕೈ ಕೊಟ್ಟಿದ್ದರಿಂದ ಪಕ್ಷದ ಅಭ್ಯರ್ಥಿ ಅಂಬಿಕಾ ನಾರಾಯಣಸ್ವಾಮಿ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದು ಬಿಜೆಪಿ ಬೆಂಬಲಿತ ಡಿ.ಎಸ್.ಆನಂದ್ ಬಾಬು ರೆಡ್ಡಿ ಅಧ್ಯಕ್ಷರಾಗಿ ಮತ್ತು ಜೆಡಿಎಸ್‌ನ ವೀಣಾ ರಾಮು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅನರ್ಹತೆ ಭೀತಿಯಲ್ಲಿನ ಸದಸ್ಯರು: ವಿಪ್ ಉಲ್ಲಂಘಿಸಿ ಚುನಾವಣೆಯಿಂದ ದೂರ ಉಳಿದ ಶಕೀಲಾ ಭಾನು (2ನೇ ವಾರ್ಡ್), ರತ್ನಮ್ಮ (3 ನೇ ವಾರ್ಡ್), ಸ್ವಾತಿ ಮಂಜುನಾಥ್ (25ನೇ ವಾರ್ಡ್), ಬಹಿರಂಗವಾಗಿ ಅಡ್ಡ ಮತದಾನ ಚಲಾಯಿಸಿದ ಎಸ್.ಎಂ.ರಫೀಕ್ (17 ನೇ ವಾರ್ಡ್), ಅಫ್ಜಲ್ (21 ನೇ ವಾರ್ಡ್), ಚಂದ್ರಶೇಖರ್ (28 ನೇ ವಾರ್ಡ್), ಮೀನಾಕ್ಷಿ (30 ನೇ ವಾರ್ಡ್) ಅನರ್ಹತೆಯ ಭೀತಿಯಲ್ಲಿದ್ದಾರೆ.
ಜತೆಗಾರರ ವಂಚನೆ!: ನಗರಸಭೆಯ 31 ಸದಸ್ಯ ಬಲದಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಪಕ್ಷೇತರ 4 ಮತ್ತು ಜೆಡಿಎಸ್ 2 ಸದಸ್ಯರಿದ್ದು ಸ್ಪಷ್ಟ ಬಹುಮತದ ನಡುವೆಯೂ ಆಡಳಿತದ ಚುಕ್ಕಾಣಿ ತಪ್ಪಿ ಹೋಗಿರುವುದಕ್ಕೆ ಕೈ ಪಾಳಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ರೂಪಿಸಿದ್ದ ತಂತ್ರಗಾರಿಕೆ ಉಲ್ಟಾ ಪಲ್ಟಾ ಆಗಿದ್ದು ಸ್ವಪಕ್ಷೀಯ ಮೂವರು ಸದಸ್ಯರ ತಟಸ್ಥ ಧೋರಣೆ, 4 ಮಂದಿ ಬಹಿರಂಗವಾಗಿ ವಿಪ್‌ಗೆ ವಿರುದ್ಧವಾಗಿ ಮತ ಚಲಾವಣೆಯಿಂದ ಪಕ್ಷದ ಸೋಲಿಗಿಂತಲೂ ಜತೆಯಲ್ಲಿದ್ದವರ ವಂಚನೆಯೇ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿತ್ತು.
ಪ್ರಕರಣ ಇತ್ಯರ್ಥ ವಿಳಂಬ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ 2020ರ ನ.18 ರಂದು ಜಿಲ್ಲಾಧಿಕಾರಿ ಆರ್.ಲತಾಗೆ ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಪಕ್ಷಾಂತರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು. ಆದರೆ, ಹಲವು ಬಾರಿ ನೋಟಿಸ್ ನೀಡುವಿಕೆ, ವಿಚಾರಣೆ ಮುಂದೂಡಿಕೆಯಲ್ಲಿ ಕಾಲಹರಣವಾಗಿದ್ದರಿಂದ ಕಾಂಗ್ರೆಸ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ಬಿರುಸುಗೊಂಡ ಸದಸ್ಯರ ಚಟುವಟಿಕೆ: ಅಡ್ಡ ಮತದಾನ ಹೊಸದೇನಲ್ಲ. ಹಿಂದಿನಿಂದಲೂ ಪಕ್ಷದ ಹಿತಕ್ಕಿಂತಲೂ, ವೈಯಕ್ತಿಕ ಲಾಭದ ಲೆಕ್ಕಾಚಾರವೇ ಗೆಲುವು ಸಾಧಿಸಿದೆ. ಇದೇ ಮಾದರಿಯಲ್ಲಿ 7 ಸದಸ್ಯರು ಪಕ್ಷಕ್ಕೆ ಕೈ ಕೊಟ್ಟಿದ್ದಾರೆ. ಉಚ್ಚಾಟನೆ ಶಿಕ್ಷೆಗೆ ಗುರಿಯಾದರೂ ಆಡಳಿತ ಪಕ್ಷ ಬೆಂಬಲಿತರೊಂದಿಗೆ ನಿರಂತರವಾಗಿ ಗುರುತಿಸಿಕೊಂಡಿದ್ದು ಮತ್ತಷ್ಟು ಕಾಂಗ್ರೆಸ್ ಕಣ್ಣು ಕೆಂಪಗಾಗಿಸಿತ್ತು. ನಗರಸಭೆಯ ಪ್ರತಿ ಸಭೆಯಲ್ಲೂ ಸ್ವಪಕ್ಷೀಯ ಸದಸ್ಯರೊಂದಿಗೆ ಕೂರುತ್ತಿರಲಿಲ್ಲ. ಇದೀಗ ಅನರ್ಹತೆಯ ಭೀತಿಯಲ್ಲಿ ಕಾನೂನಿನ ರಕ್ಷಣೆ ಪಡೆಯಲು ಕಸರತ್ತು ನಡೆಸುತ್ತಿದ್ದು, ಖಾಸಗಿ ಹೋಟೆಲ್‌ಗಳಲ್ಲಿ ಸಭೆ, ಹಿರಿಯ ವಕೀಲರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ.
ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧದ ಕ್ರಮಕ್ಕೆ ಸಲ್ಲಿಸಿದ ದೂರಿನ ಇತ್ಯರ್ಥ ವಿಳಂಬದ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾಯಾಲಯ 4 ವಾರಗಳೊಳಗೆ ಪ್ರಕರಣ ಇತ್ಯರ್ಥಪಡಿಸಲು ಸೂಚಿಸಿದೆ. ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಚಿಕ್ಕಬಳ್ಳಾಪುರ