ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ 
ಜಿಲ್ಲೆ

ಕಾಂಗ್ರೆಸ್‌ಗೆ ದೇಶಾದ್ಯಂತ ಸೋಲಿನ ಭೀತಿ: ಬಿವೈಆರ್

ಶಿವಮೊಗ್ಗ: ಸೋಲಿನ ಭೀತಿಯಿಂದ ಕಾಂಗ್ರೆಸ್ ಮುಖಂಡರು ಇವಿಎಂ, ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಬಗ್ಗೆ ಕೀಳು ಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಿಡಿಕಾರಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಕ್ರಿಯೆ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಮತಯಂತ್ರದ ಬದಲು ಮತಪತ್ರ ನೀಡಬೇಕು ಎನ್ನುತ್ತಿದ್ದಾರೆ. ಮುಂಬರುವ ಸೋಲಿಗೆ ಈಗಲೇ ಕಾರಣ ಹುಡುಕುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಬಗ್ಗೆ ಕೀಳು ಮಟ್ಟದ ಜಾಹೀರಾತು ನೀಡಿದೆ. ಚೊಂಬನ್ನು ಜನರಿಗೆ ನೀಡಿದ್ದೇ ಕಾಂಗ್ರೆಸ್. ಈಗ ಕೇಂದ್ರ ಸರ್ಕಾರ ಚೊಂಬು ನೀಡಿದೆ ಎನ್ನುವ ಮೂಲಕ ಕೀಳು ರಾಜಕೀಯಕ್ಕೆ ಮುಂದಾಗಿದೆ. ಪತ್ರಿಕೆಗಳಲ್ಲಿ ಚೊಂಬಿನ ಜಾಹೀರಾತು ನೀಡಿರುವ ಕಾಂಗ್ರೆಸ್‌ನ್ನು ಮುಂದೆ ನಾವು ಚೊಂಬಿನ ಜಾಗದಲ್ಲಿ ಕೂರಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಹತ್ಯೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮುಸ್ಲಿಂ ಸಮಾಜದ ದುಷ್ಟ ಶಕ್ತಿಗಳಿಗೆ ಬಲ ಬಂದಂತಾಗಿದೆ. ಇಂತವರನ್ನು ರಾಜ್ಯ ಸರ್ಕಾರ ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.