ನಂದಗುಡಿ ಎಂ. ರಾಮೇಗೌಡ
ರಾಗಿ, ಜೋಳ, ಹಲಸಂದೆ, ತೊಗರಿ ಸೇರಿ ಮತ್ತಿತರ ಬೆಳೆಗಳಿಗೆ ಮಳೆ ಕೊರತೆ ಆತಂಕ ಅನುಭವಿಸುತ್ತಿದ್ದ ರೈತರ ಪಾಲಿಗೆ ಈಗ ಸುರಿಯುತ್ತಿರುವ ಧಾರಾಕಾರ ಮಳೆ ಬೆಳೆ ನಷ್ಟದ ಭೀತಿ ಹುಟ್ಟಿಸಿದೆ. ನಂದಗುಡಿ ಹೋಬಳಿ ಸೇರಿ ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ಬೆಳೆಯಾದ ರಾಗಿ ಸಲು ನೆಲಕಚ್ಚುವ ಆತಂಕ ಎದುರಾಗಿದೆ. ಹೊಸಕೋಟೆ ತಾಲೂಕಿನಲ್ಲಿ ಮಳೆಯಾಶ್ರಿತ 10 ಸಾವಿರ ಹೆಕ್ಟೇರ್, ನೀರಾವರಿ 215 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ರಾಜ್ಯ ಸರ್ಕಾರ ಈಗಾಗಲೇ ರಾಗಿ ಖರೀದಿಗಾಗಿ ಖರೀದಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಿದೆ. ಎಪಿಎಂಸಿ ಮಾರುಕಟ್ಟೆ ಕೇಂದ್ರಗಳಲ್ಲಿ ರೈತರ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಮಧ್ಯೆ ಮಳೆರಾಯ ರೈತರ ಮೇಲೆ ಪ್ರತಾಪ ತೋರಿಸುತ್ತಿರುವಂತಿದೆ.
ತೇವಾಂಶದ ಆತಂಕ: ಪ್ರಸ್ತುತ ಕಾಳು ಕಟ್ಟುವಹಂತದಲ್ಲಿರುವ ರಾಗಿ ಬೆಳೆ ತೂಕ ಹಾಗೂ ತೇವಾಂಶ ಹೆಚ್ಚಾಗಿರುವ ಕಾರಣ ನೆಲಕ್ಕುರುಳಿದೆ. ರಾಗಿ ನೆಲಕಚ್ಚುತ್ತಿರುವುದರಿಂದ ತೆನೆ ಮತ್ತು ಮೇವು ಮಣ್ಣಾಗಿ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಕಾಡಲಿದೆ ಎಂಬ ಆತಂಕ ರೈತರದ್ದಾಗಿದೆ. ಅಕ್ಟೋಬರ್ನಲ್ಲಿ ಸುರಿದ ಮಳೆ ಪರಿಣಾಮ ಬೆಳೆ ನೆಲಕಚ್ಚಿದೆ. ನೆಲಕಚ್ಚಿರುವ ರಾಗಿ ಕೈಗೆ ಸಿಗುವುದೋ ಅಥವಾ ಇಲ್ಲವೋ ಎಂಬ ಆತಂಕ ಆವರಿಸಿದೆ.
ಬೆಂಕಿರೋಗ : ಅನೇಕ ಕಡೆಗಳಲ್ಲಿ ರಾಗಿ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿಸಿರುವುದು ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಸಾಲ ಮಾಡಿ ರಾಗಿ ಬೆಳೆ ಮಾಡಿದ್ದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೃಷಿ ಇಲಾಖೆ ಅಧಿಕಾರಿಗಳು ವಾತಾವರಣ ಬದಲಾವಣೆಯಿಂದಾಗಿ ರೋಗ ಕಾಣಿಸಿಕೊಂಡಿದೆ ಎಂದು ಹೇಳಿ ಕೈಚೆಲ್ಲುತ್ತಿದ್ದಾರೆ ವಿನಾ ಇನ್ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಒಂದೆರಡು ವಾರಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರಾಗಿ, ಹಲಸಂದೆ, ತೊಗರಿ, ಅವರೆ ಮುಂತಾದ ಬೆಳೆಗಳಿಗೆ ತೊಂದರೆಯಾಗಿದೆ.ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಿದ್ದರೂ ಮಳೆ ಬರದಿದ್ದರೂ ಸಮಸ್ಯೆ, ಬಂದರೂ ಸಮಸ್ಯೆ ಎಂಬಂತಾಗಿದೆ. ಬಿತ್ತನೆ ಮಾಡಿರುವ ಬೆಳೆಗಳು ಇದೇ ರೀತಿ ನೆಲಕುರುಳುತ್ತಿದ್ದರೆ ಬೆಳೆ ಕೈಗೆ ಸಿಗದಂತಾಗುತ್ತದೆ. > ನಾರಾಯಣಸ್ವಾಮಿ ಗಿಡ್ಡನಹಳ್ಳಿ ಈ ಬಾರಿ ತಾಲೂಕಿನಲ್ಲಿ ಮಳೆಯಾಶ್ರಿತ 10 ಸಾವಿರ ಹೆಕ್ಟೇರ್, ನೀರಾವರಿ 215 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ರಾಗಿ ಬೆಳೆಗೆ ವಿಮೆ 850 ರೈತರು ಪ್ರೊಪೋಸಲ್ ಮಾಡಿದ್ದಾರೆ. ಒಂದು ಹೆಕ್ಟೇರ್ಗೆ 16 ರಿಂದ 20 ಕ್ವಿಂಟಾಲ್ ಇಳುವರಿ ನಿರೀೆಯಲ್ಲಿದ್ದೇವೆ. ಬೆಂಕಿ ರೋಗದ ಬಗ್ಗೆ ಆತಂಕ ಬೇಡ. ಈಗಾಗಲೇ ಬಿತ್ತನೆ ವೇಳೆ ರೈತರಿಗೆ ಎರಡು ಬಾರಿ ತರಬೇತಿ ನೀಡಲಾಗಿದೆ. > ಚಂದ್ರಪ್ಪ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಹೊಸಕೋಟೆ ರಾಗಿ ರೈತನಿಗೆ ಹೆಚ್ಚು ಲಾಭ ತರುವ ಬೆಳೆಯಾಗಿ ಉಳಿದಿಲ್ಲ. ಕಾರಣ ರಾಗಿ ಬೇಸಾಯ ಮಾಡಲು ಪ್ರತಿ ಕೆಲಸಕ್ಕೂ ಕೂಲಿಕಾರರನ್ನೇ ಅವಲಂಬಿಸಬೇಕಾಗಿದೆ. ರಾಗಿ ಬೆಳೆಯಲು ಎಕರೆಗೆ 25 ರಿಂದ 30 ಸಾವಿರ ರ್ಖಚಾಗುತ್ತದೆ. ರಾಗಿಯಿಂದ 30 ರಿಂದ 35 ಸಾವಿರ ಲಾಭ ಬರಬಹುದು ಅಷ್ಟೇ. ರಾಗಿ ಮಾರಾಟಕ್ಕೆ ಆಗದಿದ್ದರೂ ಮನೆ ಬಳಕೆಗಾಗಿ ಬೆಳೆದುಕೊಳ್ಳುತ್ತಿದ್ದೇವೆ. > ಮುನಿರಾಜು ರೈತ ನಂದಗುಡಿ