ಜಿಲ್ಲೆ

ಕರೊನಾ ಸೋಂಕಿನ ಭೀತಿ: ನಗರದಿಂದ ಶೇ.50 ಜನ ಖಾಲಿ!

ಬೆಂಗಳೂರು: ಕರೊನಾ ಸೋಂಕಿನ ಭೀತಿ ಎಲ್ಲೆಡೆ ಹರಡಿದ್ದು, ಬೆಂಗಳೂರಿನಲ್ಲಿದ್ದ ಪರಊರುಗಳ ಜನ ತಮ್ಮ ಊರುಗಳತ್ತ ಗುಳೆ ಹೋಗುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಅರ್ಧದಷ್ಟು ಜನ ಖಾಲಿಯಾದಂತಾಗಿದೆ.

ನಿತ್ಯ ಸಂಚಾರ ದಟ್ಟಣೆ, ರಸ್ತೆ ಅಗೆತದಿಂದ ಧೂಳು, ವಾಹನ ಸಂಚಾರದಿಂದ ಹೊಗೆ, ಜನರಿಂದ ಗಿಜಿಗುಡುವ ಶಾಪಿಂಗ್ ಮಾಲ್​ಗಳು, ಕಾರ್ಖಾನೆಗಳ ಸದ್ದುಗಳಿಂದ ತುಂಬಿದ್ದ ರಾಜಧಾನಿ ಬೆಂಗಳೂರು ಇದೀಗ ಪ್ರಶಾಂತ ವಾಗಿದೆ. ಕರೊನಾ ಸೋಂಕು ತಡೆಗಾಗಿ ದೇಶ ಲಾಕ್​ಡೌನ್ ಆಗಿರುವ ಕಾರಣವಾಹನಗಳಿಲ್ಲದೆ ಖಾಲಿಯಾಗಿರುವ ರಸ್ತೆಗಳು, ಬೀಗ ಹಾಕಲ್ಪಟ್ಟ ಅಂಗಡಿಗಳು, ಧೂಳು, ಹೊಗೆ ಯಿಲ್ಲದ ಕೊಂಚಮಟ್ಟಿಗೆ ಶುಭ್ರವಾಗಿರುವ ರಸ್ತೆಗಳು ನಗರದೆಲ್ಲೆಡೆ ಕಂಡುಬರುತ್ತಿದೆ. ಅದರ ಜತೆಗೆ ರಾಜ್ಯ, ದೇಶದ ವಿವಿಧ ಮೂಲೆಗಳಿಂದ ಕೆಲಸಕ್ಕಾಗಿ ಬಂದಿದ್ದ ಜನರೂ ಕೂಡ ನಗರವನ್ನು ತೊರೆದಿದ್ದಾರೆ.

ಎಲ್ಲ ವರ್ಗದ ಜನರು ಖಾಲಿ: ಮೊದಲ ಕರೊನಾ ಸೋಂಕಿತ ಪತ್ತೆಯಾದ ಕೂಡಲೇ ಹಲವು ಐಟಿ-ಬಿಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ವ್ಯವಸ್ಥೆ ಮಾಡಿದವು. ನಂತರ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಹೊರ ಜಿಲ್ಲೆ ಮತ್ತು ರಾಜ್ಯಗಳ ಐಟಿ-ಬಿಟಿ ಉದ್ಯೋಗಿಗಳು ತಮ್ಮ ಊರಿಗೆ ಹೊರಟು ಹೋದರು. ಅಲ್ಲದೆ ಖಾಸಗಿ, ಸರ್ಕಾರಿ ಉದ್ಯೋಗಿಗಳು ಕೂಡ ನಗರ ತೊರೆದು ಊರಿನತ್ತ ಹೊರಟು ಹೋಗಿದ್ದಾರೆ.

ಕಾಮಗಾರಿ ಸ್ಥಗಿತ

ಕಟ್ಟಡ ನಿರ್ವಣ, ರಸ್ತೆ ದುರಸ್ತಿ ಸೇರಿ ಇನ್ನಿತರ ಕಾಮಗಾರಿಗಳು ಸ್ಥಗಿತಗೊಂಡ ಕಾರಣ ಹೊಟ್ಟೆಪಾಡಿಗಾಗಿ ಬಂದಿದ್ದ ಬೇರೆ ಊರಿನವರಿಗೆ ಕೆಲಸವಿಲ್ಲದಂತಾಗಿದೆ. ಕರೊನಾ ಭೀತಿಯಿಂದಲ್ಲದಿದ್ದರೂ ಕೂಲಿಯಿಲ್ಲದ ಕಾರಣ ಬೆಂಗಳೂರನ್ನು ತೊರೆದಿದ್ದಾರೆ. ಲಾಕ್​ಡೌನ್ ನಂತರ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಹೀಗಾಗಿ ಊರಿನಿಂದ ಬಂದಾಗ ತಂದಿದ್ದ ಟ್ರಾ್ಯಕ್ಟರ್ ಸೇರಿ ಇನ್ನಿತರ ವಾಹನಗಳ ಮೂಲಕ ರಾತ್ರಿ ವೇಳೆ ನಗರದಿಂದ ಹೊರಹೋಗುತ್ತಿದ್ದಾರೆ.