ಜಿಲ್ಲೆ

ಟೋಲ್ ವಿನಾಯಿತಿ ರದ್ದು ಭೀತಿ, ಕರಾವಳಿಯಲ್ಲಿ ವಿರೋಧ, 15ರಿಂದ ಫಾಸ್ಟಾೃಗ್ ಮಾತ್ರ ಹಿನ್ನೆಲೆ

ವೇಣುವಿನೋದ್ ಕೆ.ಎಸ್.ಮಂಗಳೂರು

ಈ ತಿಂಗಳ 15ರಿಂದಲೇ ದೇಶಾದ್ಯಂತ ಟೋಲ್‌ಗೇಟ್‌ಗಳಲ್ಲಿ ಫಾಸ್ಟಾೃಗ್ ಕಡ್ಡಾಯವಾಗುತ್ತಿದ್ದು ಕರಾವಳಿ ವ್ಯಾಪ್ತಿಯ ಆರು ಸುಂಕಗಟ್ಟೆಗಳೂ ಸಜ್ಜಾಗಿವೆ. ಇನ್ನೊಂದೆಡೆ, ಫಾಸ್ಟಾೃಗ್ ಬಳಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ಟೋಲ್ ವಿನಾಯಿತಿ ಅವಕಾಶ ಕೈತಪ್ಪಲಿದ್ದು, ಸ್ಥಳೀಯರು ಸಂಘಟಿತರಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕರಾವಳಿಯ ತಲಪಾಡಿ ಹೊರತುಪಡಿಸಿ, ಬ್ರಹ್ಮರಕೂಟ್ಲು, ಎನ್‌ಐಟಿಕೆ ಸುರತ್ಕಲ್, ಹೆಜಮಾಡಿ, ಸಾಸ್ತಾನ, ಶಿರೂರು ಟೋಲ್‌ಗೇಟ್‌ಗಳಲ್ಲಿ ಕಡೆ ಫಾಸ್ಟಾೃಗ್ ಬಳಕೆ ಏರಿಕೆ ಕಂಡಿದೆ.

ಪ್ರತಿ ದಿನವೂ ಫಾಸ್ಟಾೃಗ್‌ಗೆ ಬದಲಾಗುತ್ತಿರುವವರ ಸಂಖ್ಯೆ ಏರಿಕೆಯಲ್ಲಿದೆ. ಹಾಗಾಗಿ ಇನ್ನು 13 ದಿನಗಳಲ್ಲಿ ಬಹುತೇಕ ಮಂದಿ ಪರಿವರ್ತನೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು. ವರ್ಷದ ಹಿಂದೆ ಜಿಲ್ಲೆಯಲ್ಲಿ ಸರಾಸರಿ ಫಾಸ್ಟಾೃಗ್ ಬಳಕೆ ಶೇ.40ರಷ್ಟಿತ್ತು, ಈಗ ಅದು ಶೇ.70ರ ವರೆಗೆ ಏರಿಕೆಯಾಗಿರುವುದು ಧನಾತ್ಮಕ ಅಂಶ. ತಲಪಾಡಿಯಲ್ಲಿ ಕೇರಳ ಕಡೆಯಿಂದ ಹೋಗಿಬರುವವರು ಜಾಸ್ತಿಯಿದ್ದು ಅವರು ಫಾಸ್ಟಾೃಗ್‌ಗೆ ಬದಲಾಗುವ ಅನುಪಾತ ಕಡಿಮೆ.

ಸ್ಥಳೀಯರಿಗೆ ವಿನಾಯಿತಿ ಇಲ್ಲ: ಇನ್ನು ಮುಂದೆ ಆಯಾ ಟೋಲ್‌ಗೇಟ್ ಸಮೀಪ ವಾಸಿಸುವ ಸ್ಥಳೀಯರಿಗೆ ಟೋಲ್‌ಗೇಟಲ್ಲಿ ಪೂರ್ಣ ವಿನಾಯಿತಿ ಇಲ್ಲ. ಅವರು 275 ರೂ.ನ ಪಾಸ್ ಮಾಡಿಸಿಕೊಳ್ಳಬಹುದು. ಇದರಲ್ಲಿ ಖಾಸಗಿ ಕಾರುಗಳಿಗೆ ಅನಿಯಮಿತ ಓಡಾಟ ನಡೆಸಬಹುದು, ವಾಣಿಜ್ಯ ವಾಹನಗಳು 50 ಟ್ರಿಪ್ ಮಾಡಬಹುದು. ಪಾಸ್ ಮಾಡಿದ ಬಳಿಕ ಅದನ್ನು ಫಾಸ್ಟಾೃಗ್‌ಗೆ ಲಿಂಕ್ ಮಾಡಲಾಗುತ್ತದೆ. ಈ ನಿಯಮಕ್ಕೆ ಸ್ಥಳೀಯರು, ಬಸ್ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ಥಳೀಯರಿಗೆ ಪೂರ್ಣ ವಿನಾಯಿತಿ ನೀಡಬೇಕು, ಇದನ್ನು ರದ್ದು ಮಾಡಲು ಬಿಡುವುದಿಲ್ಲ ಎಂದು ಹೋರಾಟಗಾರರು ತಿಳಿಸಿದ್ದಾರೆ.

‘ಓನ್ಲಿ ಕ್ಯಾಶ್’ ಲೇನ್ ರದ್ದು: 15ರ ಬಳಿಕ ಯಾವುದೇ ಟೋಲ್‌ಗೇಟ್‌ನಲ್ಲೂ ‘ಓನ್ಲಿ ಕ್ಯಾಶ್’ ಲೇನ್ ಇರುವುದಿಲ್ಲ. ಫಾಸ್ಟಾೃಗ್ ಇರುವವರಷ್ಟೇ ಇನ್ನು ಟೋಲ್‌ಗೇಟ್‌ನ ಯಾವುದೇ ಲೇನ್‌ನಲ್ಲಿ ಹೋಗಬಹುದು. ಇಲ್ಲವಾದರೆ ಅಂತಹವರ ಮನವೊಲಿಸಿ ಅವರಿಗೆ ಫಾಸ್ಟಾೃಗ್ ಕೊಡಿಸುವ ಯತ್ನ ಮಾಡಲಾಗುವುದು. ಸದ್ಯ ಎಲ್ಲ ಟೋಲ್‌ಗಳಲ್ಲೂ ತಲಾ ಒಂದು ಓನ್ಲಿ ಕ್ಯಾಶ್ ಲೇನ್ ಇದ್ದು, ಅದರಲ್ಲಿ ಯಾವಾಗಲೂ ದಟ್ಟಣೆ ಹೆಚ್ಚಿರುತ್ತದೆ. ಒಂದು ವೇಳೆ ಫಾಸ್ಟಾೃಗ್ ಲೇನ್‌ಗೆ ಹೋದರೆ ಅಂತಹವರಿಗೆ ದುಪ್ಪಟ್ಟು ಟೋಲ್ ಹೇರಲಾಗುತ್ತದೆ. ಜನರಿಗೆ ಫಾಸ್ಟಾೃಗ್‌ಗೆ ಬದಲಾಗಲು ಬೇಕಾದ ಅನುಕೂಲಗಳನ್ನು ಎನ್‌ಎಚ್‌ಎಐ ಮಾಡಿಕೊಟ್ಟಿದೆ. ಪ್ರತೀ ಟೋಲ್‌ಗೇಟಲ್ಲೂ ಫಾಸ್ಟಾೃಗ್, ರಿಚಾರ್ಜ್‌ಗೆ ಪಾಯಿಂಟ್ ಆಫ್ ಸೇಲ್ ಕೌಂಟರ್‌ಗಳನ್ನು ಮಾಡಲಾಗಿದೆ. ತಲಪಾಡಿ ಹಾಗೂ ಹೆಜಮಾಡಿಯಲ್ಲಿ ತಲಾ 5, ಬ್ರಹ್ಮರಕೂಟ್ಲುವಿನಲ್ಲಿ 3, ಎನ್‌ಐಟಿಕೆ ಹಾಗೂ ಸಾಸ್ತಾನದಲ್ಲಿ ತಲಾ 4 ಪಿಒಎಸ್ ಕೌಂಟರ್ ಹಾಕಲಾಗಿದೆ.

ಸದ್ಯ ಫಾಸ್ಟಾೃಗ್ ಬಳಕೆ:

ಹೆಜಮಾಡಿ : ಶೇ.70.13

ಸಾಸ್ತಾನ : ಶೇ.70.25

ಬ್ರಹ್ಮರಕೂಟ್ಲು : ಶೇ.91.43

ಎನ್‌ಐಟಿಕೆ : ಶೇ.84.43

ತಲಪಾಡಿ : ಶೇ.57.71

ಉಡುಪಿಯಲ್ಲೂ ಸಿದ್ಧತೆ: ಉಡುಪಿ: ಜಿಲ್ಲೆಯ ಶಿರೂರು, ಸಾಸ್ತಾನ, ಹೆಜಮಾಡಿ ಮೂರು ಟೋಲ್‌ಗಳಿದ್ದು, ಫಾಸ್ಟಾೃಗ್ ಇಲ್ಲದ ವಾಹನಗಳಿಗೆ ಒಂದು, ಎರಡು ಲೇನ್‌ಗಳಲ್ಲಿ ಕ್ಯಾಶ್ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. 15ರ ನಂತರ ಎಲ್ಲ ಕ್ಯಾಶ್ ಕೌಂಟರ್‌ಗಳನ್ನೂ ರದ್ದು ಮಾಡಲಾಗುತ್ತದೆ. ಫಾಸ್ಟಾೃಗ್ ಇಲ್ಲದ ವಾಹನಗಳು ಟೋಲ್ ಪಾಸ್ ಆಗಲು ಸಾಧ್ಯವೇ ಇಲ್ಲ ಎಂದು ಹೆದ್ದಾರಿ ಇಲಾಖೆ ಇಂಜಿನಿಯರ್‌ಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶೇ.70ರಷ್ಟು ವಾಹನಗಳು ಫಾಸ್ಟಾೃಗ್ ಅಳವಡಿಸಿಕೊಂಡಿದ್ದು, ಇನ್ನುಳಿದ ದಿನಗಳಲ್ಲಿ ಶೇ.30ರಷ್ಟು ವಾಹನಗಳು ಫಾಸ್ಟಾೃಗ್ ಅಳವಡಿಸಬೇಕು ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸುರತ್ಕಲ್ ಟೋಲ್ ರದ್ದು ಆಗ್ರಹಿಸಿ 7ಕ್ಕೆ ಸಭೆ: ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ರದ್ದುಗೊಳಿಸಲು ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ. ಈ ಕುರಿತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಫೆ.7ರಂದು ಬೆಳಗ್ಗೆ 9ಕ್ಕೆ ಮುಕ್ಕದಲ್ಲಿರುವ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಸುರತ್ಕಲ್‌ನಲ್ಲಿರುವ ಟೋಲ್‌ಗೇಟ್ ಅಕ್ರಮವಾಗಿದ್ದು, ಅದಕ್ಕೆ ಮಾನ್ಯತೆ ಇಲ್ಲ. ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ನಡೆಸಿದಾಗಲೂ ಸ್ಥಳೀಯ ಜನಪ್ರತಿನಿಧಿಗಳು ಅದನ್ನು ರದ್ದುಗೊಳಿಸುತ್ತೇವೆ, ಹೆಜಮಾಡಿ ಜತೆ ವಿಲೀನ ಮಾಡುತ್ತೇವೆ ಎಂದೆಲ್ಲ ಹೇಳಿದ್ದಾರೆ. ಆದರೆ ಇನ್ನೂ ಟೋಲ್‌ಗೇಟ್ ಮುಂದುವರಿಸಿರುವುದೇ ಅಕ್ರಮ. ಹಾಗಾಗಿ ಅದನ್ನು ರದ್ದುಗೊಳಿಸುವುದು ಅನಿವಾರ್ಯ ಎಂದು ಹೋರಾಟಗಾರರು ತಿಳಿಸಿದ್ದಾರೆ.