ಜಿಲ್ಲೆ

ಗಂಗೊಳ್ಳಿಯಲ್ಲಿ ಕೃತಕ ನೆರೆ ಭೀತಿ!

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮಳೆಗಾಲ ಸಮೀಪಿಸುತ್ತಿದ್ದು ಪ್ರತೀ ವರ್ಷದಂತೆ ಈ ವರ್ಷವೂ ಗಂಗೊಳ್ಳಿಯಲ್ಲಿ ಕೃತಕ ನೆರೆ ಭೀತಿ ಎದುರಾಗಿದೆ. ಆದರೆ ಸ್ಥಳೀಯ ಗ್ರಾಮ ಪಂಚಾಯಿತಿ ಮಳೆಗಾಲಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಇನ್ನೂ ಆರಂಭಿಸಿಲ್ಲ.

ಗಂಗೊಳ್ಳಿಯಲ್ಲಿ ತಗ್ಗು ಪ್ರದೇಶಗಳೇ ಹೆಚ್ಚಿದ್ದು, ಸ್ವಲ್ಪ ಜಾಸ್ತಿ ಮಳೆ ಸುರಿದರೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಉಂಟಾಗುತ್ತದೆ. ಸೂಕ್ತ ಚರಂಡಿ ಹಾಗೂ ಮಳೆ ನೀರಿನ ಹರಿವಿಗೆ ವ್ಯವಸ್ಥೆಗಳಿಲ್ಲ. ಜತೆಗೆ ಸಮಸ್ಯೆಗಳಿಗೆ ಪ್ರತಿ ವರ್ಷವೂ ತೇಪೆ ಹಾಕುವುದರಲ್ಲೇ ಕಾಲಹರಣ ಮಾಡುತ್ತಿರುವ ಸ್ಥಳೀಯ ಆಡಳಿತ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ. ಚರಂಡಿ ಸಹಿತ ತೋಡುಗಳಲ್ಲಿ ತ್ಯಾಜ್ಯ, ಹೂಳು ತುಂಬಿಕೊಂಡಿದ್ದು, ತೆಗೆಸುವ ಕಾರ್ಯ ಇನ್ನೂ ಆರಂಭವಾಗಿಲ್ಲ.

ಕೆಲವು ಪ್ರಮುಖ ಚರಂಡಿಗೆ ಶೌಚಾಲಯ ಮತ್ತು ಸ್ನಾನಗೃಹದ ನೀರನ್ನು ಹರಿಯ ಬಿಡಲಾಗುತ್ತಿದೆ. ಇವುಗಳನ್ನು ಸ್ವಚ್ಛಗೊಳಿಸುವುದೇ ಸ್ಥಳೀಯಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಸ್ಥಳಿಯಾಡಳಿತ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಚರಂಡಿ, ತೋಡು ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಎಲ್ಲೆಲ್ಲಿ ಚರಂಡಿ ಸಮಸ್ಯೆ?

ಗಂಗೊಳ್ಳಿಯ ಮುಖ್ಯರಸ್ತೆಯಿಂದ ಚರ್ಚ್ ರಸ್ತೆ ಮೂಲಕ ಸಾಗುವ ಚರಂಡಿ, ದೊಡ್ಡಹಿತ್ಲು ತೋಡು, ಗೋಧಿ ತೋಡು, ಮ್ಯಾಂಗನೀಸ್ ರಸ್ತೆ ತೋಡು ಸಹಿತ ಅನೇಕ ಚರಂಡಿ ಹಾಗೂ ತೋಡುಗಳು ತ್ಯಾಜ್ಯ, ಹೂಳಿನಿಂದ ತುಂಬಿಕೊಂಡಿವೆ. ಇನ್ನೂ ಹಲವೆಡೆ ಚರಂಡಿಗಳಿಗೆ ಮಣ್ಣು ಸುರಿಯಲಾಗಿದ್ದು, ಕೆಲವೆಡೆ ಗಿಡ ಪೊದೆಗಳು ಆವರಿಸಿವೆ. ಮ್ಯಾಂಗನೀಸ್ ರಸ್ತೆಯಲ್ಲಿರುವ ಚರಂಡಿಯಲ್ಲಿ ಬೋಟ್, ಕಟ್ಟಡ ತ್ಯಾಜ್ಯಗಳನ್ನು ಬೇಕಾಬಿಟ್ಟಿ ಎಸೆಯಲಾಗಿದೆ.

ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು. ಚರಂಡಿಗಳಿಗೆ ಮಣ್ಣು ಹಾಕಿ ಮಳೆ ನೀರು ಹರಿವಿಗೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕೃತಕ ನೆರೆ ಬಾಧಿಸದಂತೆ ಕ್ರಮಕೈಗೊಳ್ಳಲಾಗುವುದು.

ಜಯಂತಿ ಖಾರ್ವಿ, ಅಧ್ಯಕ್ಷೆ, ಗಂಗೊಳ್ಳಿ ಗ್ರಾಮ ಪಂಚಾಯಿತಿ

* ಮಳೆಗಾಲ ಆರಂಭವಾಗುತ್ತಿದ್ದರೂ ಪೂರ್ವಸಿದ್ಧತೆ ಇಲ್ಲ* ಚರಂಡಿ, ತೋಡುಗಳಲ್ಲಿ ತುಂಬಿದ ಹೂಳು* ಗಂಗೊಳ್ಳಿ ಗ್ರಾ.ಪಂ. ನಿರ್ಲಕ್ಷೃ ನಡೆ