ಜಿಲ್ಲೆ

ಗುಡ್ಡ ಕುಸಿಯುವ ಭೀತಿ

ಉತ್ತರ ಕನ್ನಡ ಡೆಸ್ಕ್

ಭಟ್ಕಳ: ಬಂದರಿನ ತಲಗೋಡ ಗೊಂಡರ ಕೇರಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿದ್ದು, ಯಾವುದೇ ಸಂದರ್ಭದಲ್ಲಿ ಭೂಕುಸಿತವಾಗುವ ಆತಂಕವಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಸೂಚಿಸಿ, ಅದನ್ನೇ ಅನುಸರಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಗುರುವಾರ ಆದೇಶ ಹೊರಡಿಸಿದ್ದಾರೆ.

ಮಾವಿನಕುರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಗೋಡಿನ ಗೊಂಡರ ಕೇರಿಯಲ್ಲಿ ಭೂಕುಸಿತದಿಂದಾಗಿ ರಸ್ತೆಯ ಪಕ್ಕದಲ್ಲಿ ನಿರ್ವಿುಸಲಾಗಿದ್ದ ಕಾಂಕ್ರೀಟ್ ಗೋಡೆ ಕುಸಿದಿದೆ. ಇದರಿಂದಾಗಿ ಬೆಟ್ಟದ ಇನ್ನಷ್ಟು ಭಾಗ ಕುಸಿಯುವ ಸಂಭವವಿದೆ. ಬೆಟ್ಟದ ಅರ್ಧ ಭಾಗವು ಈಗಾಗಲೇ ಕುಸಿದಿದ್ದು, ಭಾರಿ ಪ್ರಮಾಣದ ಮಳೆಯಾದರೆ ಬೆಟ್ಟದ ಮೇಲ್ಭಾಗದಲ್ಲಿರುವ ದೊಡ್ಡ ದೊಡ್ಡ ಕಲ್ಲುಗುಂಡಿಗಳು ಕೆಳಗೆ ಜಾರಿ ಬೀಳುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಸಂಚರಿಸುವ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಇದು ದೊಡ್ಡ ಅಪಾಯವನ್ನುಂಟು ಮಾಡಬಹುದು. ಜತೆಗೆ, ರಸ್ತೆಯ ಕೆಳಭಾಗದಲ್ಲಿ ಇರುವ ಮನೆಗಳಿಗೆ ಭಾರಿ ಹಾನಿಯಾಗುವ ಸಂಭವವಿದೆ.

ತಹಸೀಲ್ದಾರ್ ನಾಗೇಂದ್ರ ಅವರು, ರಕ್ಷಣಾ ಗೋಡೆ ನಿರ್ವಣಕ್ಕಾಗಿ 25 ಲಕ್ಷ ರೂಪಾಯಿಗಳ ಯೋಜನೆ ಸಿದ್ಧಪಡಿಸಿದ್ದರು. ಗೋಡೆ ನಿರ್ಮಾಣ ಕಾರ್ಯ ಮುಗಿಯುವವರೆಗೂ ರಸ್ತೆಯಲ್ಲಿ ಸಂಚಾರ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಜತೆಗೆ, ರಸ್ತೆಯ ಕೆಳಭಾಗದಲ್ಲಿ ಮನೆಗಳಿರುವವರು ಭಾರಿ ಮಳೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಪರಿಹಾರ ಕೇಂದ್ರಕ್ಕೆ ಅಥವಾ ಸಂಬಂಧಿಕರ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಸೂಚಿಸಿದ್ದರು.

ಶಾಲೆಯ ಮೇಲೆ ಗುಡ್ಡ ಕುಸಿಯುವ ಆತಂಕ: ಈ ಸ್ಥಳದಲ್ಲಿ ಬೆಟ್ಟವನ್ನು ಕಡಿದು ನಿರ್ವಿುಸಲಾಗಿರುವ ಶಾಲೆಯೂ ಅಪಾಯದಲ್ಲಿದೆ. ಕಡಿದ ಬೆಟ್ಟದ ಉಳಿದ ಭಾಗದಿಂದ ದೊಡ್ಡ ಕಲ್ಲುಗಳು ಶಾಲೆಯ ಕಡೆಗೆ ಜಾರಿ ಬೀಳುವ ಸಂಭವವಿದೆ. ಯಾವುದೇ ಅನಾಹುತ ಸಂಭವಿಸುವ ಮೊದಲೇ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾವಿನಕುರ್ವ ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಶೇಖರ ಇಟಗಿ, ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ದೇವಿದಾಸ ನಾಯ್್ಕ ರಾಮ ಗೊಂಡ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಆದೇಶದಲ್ಲೆನಿದೆ: ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಪಂ ವ್ಯಾಪ್ತಿಯ ತಲಗೋಡ ಗೊಂಡರಕೇರಿಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಗುಡ್ಡ ಕುಸಿಯುವ ಸಂಭವಿದೆ. ಸಾರ್ವಜನಿಕ ಸುರಕ್ಷಾತಾ ಹಿತದೃಷ್ಟಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಉತ್ತರ ಕನ್ನಡ ಜಿಲೆಯ ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಗೋಡ ಗೊಂಡರಕೇರಿ ರಸ್ತೆಯಲ್ಲಿ ವಾಹನ/ಸಾರ್ವಜನಿಕ ಸಂಚಾರವನ್ನು ಜೂ. 12ರಿಂದ 2025-26 ನೇ ಸಾಲಿನ ಮಳೆಗಾಲ ಮುಕ್ತಾಯವಾಗುವವರೆಗೆ ನಿರ್ಬಂಧಿಸಿದೆ. ಭಟ್ಕಳ ಮುಗ್ಧಮ್ ಕಾಲನಿ ಮುಖಾಂತರ ಪಥ ಬದಲಾವಣೆ ಮಾಡಿ ಸಂಚರಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.