ಜಿಲ್ಲೆ

ಸ್ಟೆನೋಗ್ರಾಫರ್ ಸನಾಗೆ ಬೇಡಿ: ಬಲೆಗೆ ಬಿದ್ದ ಡೀಲಿಂಗ್ ಮಾಸ್ಟರ್

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಮಹಿಳಾ ಸ್ಟೆನೋಗ್ರಾಫರ್ ಸನಾ ಬೇಡಿ ಅವರನ್ನು ಸಿಸಿಬಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಆರೋಪಿಗಳಾದ ಚಂದ್ರು ಮತ್ತು ರಾಚಪ್ಪನಿಂದ ಮತ್ತೆ 46 ಲಕ್ಷ ರೂ. ಜಪ್ತಿ ಮಾಡಲಾಗಿದ್ದು, ವಶಪಡಿಸಿಕೊಂಡ ಮೊತ್ತ 82 ಲಕ್ಷ ರೂ.ಗೆ ಏರಿಕೆ ಆಗಿದೆ.

ಕೆಲ ವರ್ಷಗಳಿಂದ ಕೆಪಿಎಸ್​ಸಿ ಪರೀಕ್ಷಾ ವಿಭಾಗದಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಸನಾ ಬೇಡಿ ಭಾನುವಾರ (ಜ.24) ನಡೆಯಬೇಕಿದ್ದ ಎಫ್​ಡಿಎ ಪ್ರಶ್ನೆ ಪತ್ರಿಕೆಯನ್ನು ಟೈಪ್ ಮಾಡಿದ್ದಳು. ಪೆನ್​ಡ್ರೖೆವ್ ಮೂಲಕ ಪ್ರಶ್ನೆಪತ್ರಿಕೆಯನ್ನು ಆರೋಪಿ ರಮೇಶ್ ಅಲಿಯಾಸ್ ರಾಮಪ್ಪ ಹೆರಕಲ್​ಗೆ ಕೊಟ್ಟಿದ್ದಳು. ರಮೇಶ್ ಹಣದ ಆಮಿಷಕ್ಕೊಳಗಾಗಿ ತನ್ನ ಪರಿಚಿತ ಚಂದ್ರು ಮೂಲಕ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿಸಿರುವ ಸಂಗತಿ ಸಿಸಿಬಿ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಆರೋಪಿ ಸನಾ ಬೇಡಿ ಮತ್ತು ರಮೇಶ್​ನಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ. ಇಬ್ಬರನ್ನೂ ವಿಚಾರಣೆಗೊಳಪಡಿ ಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. | ಸಂದೀಪ್ ಪಾಟೀಲ್ ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ ವಿಭಾಗ

ದುಂಬಾಲು ಬಿದ್ದಿದ್ದ

ಕೆಪಿಎಸ್​ಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ರಮೇಶ್​ಗೆ ಸನಾ ಪರಿಚಯವಿತ್ತು. ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಈಕೆಯೇ ಟೈಪ್ ಮಾಡುತ್ತಾಳೆ ಎಂಬ ವಿಚಾರವೂ ಗೊತ್ತಿತ್ತು. ಸನಾ ಭೇಟಿಯಾಗಿದ್ದ ರಮೇಶ್ ಪ್ರಶ್ನೆ ಪತ್ರಿಕೆ ನೀಡುವಂತೆ ಮನವಿ ಮಾಡಿದ್ದ. ಆದಕ್ಕೆ ಆರಂಭದಲ್ಲಿ ನಿರಾಕರಿಸಿದ ಸನಾ, ಪ್ರಶ್ನೆಪತ್ರಿಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಳು. ಇಷ್ಟಕ್ಕೆ ಸುಮ್ಮನಾಗದ ರಮೇಶ್, ಪ್ರಶ್ನೆ ಪತ್ರಿಕೆಗಾಗಿ ಕೆಲ ಸಮಯದಿಂದ ಆಕೆಗೆ ದುಂಬಾಲು ಬಿದ್ದಿದ್ದ. ಪ್ರಶ್ನೆ ಪತ್ರಿಕೆ ಎಲ್ಲೂ ಸೋರಿಕೆ ಮಾಡುವುದಿಲ್ಲ. ಎಲ್ಲೂ ಮಾಹಿತಿ ಬಹಿರಂಗಗೊಳ್ಳದಂತೆ ಗೌಪ್ಯತೆ ಕಾಪಾಡುತ್ತೇನೆ. ಈ ಬಾರಿ ಎಫ್​ಡಿಎ ಪರೀಕ್ಷೆ ಬರೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳುವ ಕನಸು ಕಂಡಿದ್ದೇನೆ. ಒಂದು ಬಾರಿ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕಿದರೆ ಪರೀಕ್ಷೆ ಬರೆಯುವುದು ಸುಲಭವಾಗುತ್ತದೆ. ದಯವಿಟ್ಟು ಸಹಾಯ ಮಾಡಿ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದ. ನಂತರ ಈತನ ಒತ್ತಾಯಕ್ಕೆ ಮಣಿದ ಸನಾ, ರಮೇಶ್ ಮೇಲೆ ನಂಬಿಕೆಯಿಟ್ಟು ಪ್ರಶ್ನೆ ಪತ್ರಿಕೆ ಕೊಡಲು ಒಪ್ಪಿದ್ದಳು.

ವಿಚಾರಣೆ ವೇಳೆ ಸುಳಿವು

ಆರೋಪಿ ರಮೇಶ್​ನನ್ನು ಭಾನುವಾರ ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದ ಸಿಸಿಬಿ ತಂಡ, ರಾತ್ರಿಯಿಡಿ ವಿಚಾರಣೆ ನಡೆಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದ. ಈತ ನೀಡಿದ ಸುಳಿವಿನ ಆಧಾರದ ಮೇಲೆ ಸೋಮವಾರ ಮುಂಜಾನೆ ಅಧಿಕಾರಿಗಳು ಸನಾ ಬೇಡಿಯ ಮನೆಗೆ ಹೋಗಿ ಆಕೆಯನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತಂದಿದ್ದರು. ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಖುದ್ದು ಆರೋಪಿ ಸನಾ ಬೇಡಿಯನ್ನು ವಿಚಾರಣೆ ನಡೆಸಿದಾಗ ಪ್ರಶ್ನೆಪತ್ರಿಕೆಯನ್ನು ರಮೇಶ್​ಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಶೋಧನಾ ಸಮಿತಿ ರಚಿಸಲಾಗಿದೆಯೇ?

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡುವ ಮುನ್ನ ಶೋಧನಾ ಸಮಿತಿ ರಚಿಸಲಾಗಿತ್ತೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ಶೋಧನಾ ಸಮಿತಿ ರಚಿಸದೆ ಕೆಪಿಎಸ್​ಸಿಗೆ ಅಧ್ಯಕ್ಷ ಹಾಗೂ ಸದ್ಯರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಆರ್​ಟಿಐ ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ವಾದ ಆಲಿಸಿದ ಪೀಠ, ಕೆಪಿಎಸ್​ಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವ ಮುನ್ನ ಶೋಧನಾ ಸಮಿತಿಯನ್ನು ರಚಿಸಲಾಗಿತ್ತೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತಲ್ಲದೆ, ನೇಮಕಾತಿಗೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸುವಂತೆ ಸೂಚಿಸಿತು. ಜತೆಗೆ, ಆಯೋಗದ ಎಲ್ಲ 11 ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಮಾತು ತಪ್ಪಿ ಸಿಕ್ಕಿಬಿದ್ದ

ಪ್ರಶ್ನೆಪತ್ರಿಕೆ ಕೈಗೆ ಸಿಗುತ್ತಿದ್ದಂತೆ ಆರೋಪಿ ಸನಾಗೆ ಕೊಟ್ಟಿದ್ದ ಮಾತು ಮರೆತ ರಮೇಶ್ ತನ್ನ ಪರಿಚಿತ ಚಂದ್ರು ಮೂಲಕ ಉಳಿದ ಎಫ್​ಡಿಎ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸಲು ಮುಂದಾಗಿದ್ದ. ಚಂದ್ರು ತನ್ನ ಸಹಚರ ರಾಚಪ್ಪ ಜತೆ ಸೇರಿ ಎಫ್​ಡಿಎ ಪರೀಕ್ಷಾ ಅಭ್ಯರ್ಥಿಗಳನ್ನು ಸಂರ್ಪಸಿ ಡೀಲ್ ಕುದುರಿಸಿದ್ದ. ಲಕ್ಷಾಂತರ ರೂ. ಕೊಟ್ಟು ಆರೋಪಿಗಳಿಂದ ಪ್ರಶ್ನೆ ಪತ್ರಿಕೆ ಖರೀದಿಸಿದ ಇನ್ನಷ್ಟು ಅಭ್ಯರ್ಥಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಶ್ನೆಪತ್ರಿಕೆ ಕೊಟ್ಟಿದ್ದು ಏಕೆ?

ರಮೇಶ್ ಎಫ್​ಡಿಎ ಪರೀಕ್ಷೆ ಬರೆಯಬೇಕಿದ್ದ ಕಾರಣ ಆತನಿಂದ ಏನನ್ನೂ ತೆಗೆದುಕೊಳ್ಳದೇ ಪ್ರಶ್ನೆಪತ್ರಿಕೆ ಕೊಟ್ಟಿರುವುದಾಗಿ ಸನಾ ಬೇಡಿ ವಿಚಾರಣೆ ವೇಳೆ ಹೇಳಿದ್ದಾಳೆ. ಆದರೆ, ತನಿಖೆ ನಡೆಸಿದ ಬಳಿಕವೇ ಯಾವ ಕಾರಣಕ್ಕೆ ರಮೇಶ್​ಗೆ ಪ್ರಶ್ನೆ ಪತ್ರಿಕೆ ಕೊಟ್ಟಿದ್ದಳು ಎಂಬುದು ಬೆಳಕಿಗೆ ಬರಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇತ್ತ ಚಂದ್ರು ಮತ್ತು ರಾಚಪ್ಪನಿಗೆ ಹಣ ಕೊಟ್ಟು ಪ್ರಶ್ನೆ ಪತ್ರಿಕೆ ಖರೀದಿಸಿದ್ದ 12 ಮಂದಿಯನ್ನು ವಿಚಾರಣೆ ನಡೆಸಿರುವ ಸಿಸಿಬಿ, ಇವರಿಂದ ಇನ್ನು ಎಷ್ಟು ಜನರಿಗೆ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.