ಜಿಲ್ಲೆ

ಎಫ್​ಡಿ ಖಾತೆಯಿಂದಲೇ ಹಣ ಲಪಟಾಯಿಸಿದ ಬ್ಯಾಂಕ್ ನೌಕರ!

ಬೆಂಗಳೂರು : ಖಾಸಗಿ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿದ್ದ ಮಹಿಳೆ ಖಾತೆಗೆ ಬ್ಯಾಂಕ್ ನೌಕರನೇ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಜಯನಗರದ ಇಕ್ವೀಟಿಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರೈ.ಲಿ. ಜಯನಗರ ಶಾಖೆ ವ್ಯವಸ್ಥಾಪಕ ಶ್ಯಾಮ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಬ್ಯಾಂಕ್ ನೌಕರ ವೈಷ್ಣವ್ ಎಂಬಾತನ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ತಿಲಕನಗರ ಪೊಲೀಸರು ತಿಳಿಸಿದ್ದಾರೆ.

ಗ್ರಾಹಕರಾದ ಸಿಂಧೂ ಎಸ್. ಉಪಾಧ್ಯ ಆಗಸ್ಟ್‌ನಲ್ಲಿ 5 ಲಕ್ಷ ರೂ. ನಿಶ್ಚಿತ ಠೇವಣಿ(ಎಫ್​ಡಿ) ಹೂಡಿಕೆ ಮಾಡಿದ್ದರು. ನೆಟ್ ಬ್ಯಾಂಕಿಂಗ್‌ನಲ್ಲಿ ಗ್ರಾಹಕರಿಗೆ ಸೇರಿದ ಹಣ ಬೇರೆ ಖಾತೆ ವರ್ಗಾವಣೆ ಆಗಿರುವುದು ಗೊತ್ತಾಗಿ. ಬ್ಯಾಂಕ್ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ ನೌಕರ ವೈಷ್ಣವ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಎಫ್​​ಡಿ ಮಾಡಿದ ಬಳಿಕ ಗ್ರಾಹಕಿ ಬ್ಯಾಂಕಿಗೆ ಬಂದು ಮೊಬೈಲ್ ನಂಬರ್ ಬದಲಾಯಿಸಲು ಬಂದಾಗ ಖಾಲಿ ಅರ್ಜಿಗೆ ಸಹಿ ಪಡೆದು ತನ್ನ ಮೊಬೈಲ್ ನಂಬರ್ ಮತ್ತು ನಕಲಿ ಇಮೇಲ್ ಐಡಿ ನಮೂದಿಸಿದ್ದ. ಗ್ರಾಹಕಿ ತೆರಳಿದ ಬಳಿಕ ಅವರ ಎಫ್​ಡಿ ಹಣವನ್ನು ಬೇರೆ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಅಲ್ಲಿಂದ ಮತ್ತೆ ಬೇರೊಂದು ಖಾತೆಗೆ ವರ್ಗಾವಣೆ ಮಾಡಿದ್ದ. ಖಾತೆ ಪರಿಶೀಲನೆ ನಡೆಸಿದಾಗ ಆಕೆ ಎಫ್​ಡಿ ಹಣಕ್ಕೂ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವ್ಯವಸ್ಥಾಪಕ ಶ್ಯಾಮ್‌ಕುಮಾರ್, ದೂರಿನಲ್ಲಿ ಮನವಿ ಮಾಡಿದ್ದಾರೆ. ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..