ಸೊರಬ: ದೂಗೂರು ಗ್ರಾಪಂನ ನೂತನ ಅಧ್ಯಕ್ಷರಾಗಿ ಫಯಾಜ್ ಅಹ್ಮದ್ ಹಾಗೂ ಉಪಾಧ್ಯಕ್ಷರಾಗಿ ಗಂಗಮ್ಮ ಅವಿರೋಧವಾಗಿ ಗುರುವಾರ ಆಯ್ಕೆಗೊಂಡರು.
8 ಸದಸ್ಯ ಬಲದ ಗ್ರಾಪಂನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ ಹಾಗೂ ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ಎಂ.ನಾಗರಾಜ್ ಕರ್ತವ್ಯ ನಿರ್ವಹಿಸಿದರು. ಪಿಡಿಒ ಸಿ.ಕೆ.ನಾಗರಾಜ್, ಗ್ರಾಪಂ ಸಹಾಯಕ ಕಾರ್ಯದರ್ಶಿ ನಂದಿನಿ ಸಹಕರಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಮಾತನಾಡಿ, ತಾಲೂಕಿನಲ್ಲಿ 25 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ದೂಗೂರು ಗ್ರಾಪಂನಲ್ಲಿ ಯಾಜ್ ಅಹ್ಮದ್ ಅವರ ಜನಸೇವೆಯನ್ನು ಜನತೆ ಮೆಚ್ಚಿದ್ದಾರೆ ಎಂದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಮಾತನಾಡಿ, ಮಧು ಬಂಗಾರಪ್ಪ ಅವರು ಸಚಿವರಾದ ಬಳಿಕ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗುತ್ತಿದೆ. ಗ್ರಾಪಂ ಚುನಾವಣೆಗಳಲ್ಲಿ ಬಹುತೇಕ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಗಾದಿ ಏರುತ್ತಿದ್ದಾರೆ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ ಎಂದು ಹೇಳಿದರು.
ದೂಗೂರು ಗ್ರಾಪಂ ನೂತನ ಅಧ್ಯಕ್ಷ ಯಾಜ್ ಅಹ್ಮದ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಎಂ.ಬಿ.ಪುಟ್ಟಪ್ಪ, ಡಿ.ಸಿ.ನಟರಾಜ, ಎಸ್.ಲೋಕೇಶ್, ಗೌರಮ್ಮ, ಶಶಿಕಲಾ, ತುಳಸಿ, ಮುಖಂಡರಾದ ಕೆ.ವಿ.ಗೌಡ, ನಾಗರಾಜ ಚಿಕ್ಕಸವಿ, ಅಶೋಕ ಹೆಗಡೆ, ರವಿ ಬರಗಿ, ಪ್ರಭು ಶಿಗ್ಗಾ, ಪ್ರೇಮಾ ಉಳವಿ, ಸುಜಾಯತ್ ಉಲ್ಲಾ, ಜಗದೀಶ್ ಕುಪ್ಪೆ, ಕೆ.ಎಚ್.ಬೈರಪ್ಪ ಮೈಸಾವಿ, ಕುಮಾರ್ ಕಣ್ಣೂರು, ಚಂದ್ರಪ್ಪ, ಚೌಡಪ್ಪ, ಗಣಪತಿ ಮೈಸಾವಿ, ಪರಮೇಶ್, ಪ್ರಶಾಂತ್ ಕೈಸೋಡಿ, ರವಿ ಏಜಾಸ್ ಆಹ್ಮದ್ ಇತರರಿದ್ದರು.