ಜಿಲ್ಲೆ

ಮಕ್ಕಳಿಗೆ ಅಪ್ಪನೇ ಮೊದಲ ಹೀರೋ: ಶಿಕ್ಷಣಾಧಿಕಾರಿ ಚಂದ್ರಶೇಖರ್ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಆದರೂ ಇದ್ಯಾವುದಕ್ಕೂ ಗಮನಕೊಡದೇ ತನ್ನ ಕರ್ತವ್ಯವನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಿರುತ್ತಾರೆ ಎಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಯೋಗಾಭ್ಯಾಸಿತರ ಮಹಿಳಾ ಬಳಗ ವಿಶ್ವ ತಂದೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪ್ಪನ ಪ್ರೀತಿ, ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ನಲ್ಲಿ ಫಾದರ್ಸ್ ಡೇ ಆಚರಿಸಲಾಗುತ್ತದೆ. ಮಕ್ಕಳ ಬಗ್ಗೆ ಕಾಳಜಿ ತೋರಿಸುವವನು ತಂದೆ. ತನ್ನ ಜವಾಬ್ದಾರಿಯನ್ನು ಪೂರೈಸುತ್ತಲೇ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುವ ಶ್ರಮಜೀವಿ ಎಂದರೆ ಅಪ್ಪ ಮಾತ್ರ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ. ಅವರು ಜತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ ಎಂದು ತಿಳಿಸಿದರು.

ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ನಾಯಕ. ಎಲ್ಲ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿಯಾಗಿ ನಿಲುತ್ತಾರೆ ಎಂದು ಸ್ಮರಿಸಿದರು.

ಮಹಿಳಾ ಬಳಗದ ಅನುಪಮಾ, ವಿಜಯಲಕ್ಷ್ಮೀ, ತಾರಾ, ರಾಣಿ, ರೇಖಾ, ಪತ್ರಕರ್ತ ಶ್ರೀಪಾದು, ಮರಿಸ್ವಾಮಿ, ಡಾ.ಚಂದ್ರೇಗೌಡ, ನರಸಿಂಹಚಾರ್, ಶಿವಲಿಂಗೇಗೌಡ ಇತರರಿದ್ದರು.