ಜಿಲ್ಲೆ

ಎಲ್ಲ ತಂದೆಯಂದಿರ ಪೋಷಕ ಸಂತ ಜೋಸೆಫ್...

ಫಾದರ್​ ಡೆನಿಸ್​ ಡೆಸಾ ಸಂದೇಶ

ತೊಟ್ಟಂ ಚರ್ಚ್​ನಲ್ಲಿ ಅಪ್ಪಂದಿರ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಂತ ಜೋಸೆಫ್ ಎಲ್ಲ ತಂದೆಯಂದಿರ ಪೋಷಕರಾಗಿದ್ದು ಅವರ ಸರಳತೆ ಹಾಗೂ ಆಧ್ಯಾತ್ಮಿಕತೆ ಸಕಲರಿಗೆ ಮಾದರಿಯಾಗಿದೆ. ಅವರೊಬ್ಬ ಮೌನ ಸಂತರಾಗಿದ್ದು, ಇತರ ಪ್ರಸಿದ್ಧ ಸಂತರಿಗೆ ಹೋಲಿಸಿದರೆ ಕಡೆಗಣಿಸಲ್ಪಡುತ್ತಿದ್ದರು. ಆದರೆ, ಮೋಕ್ಷದ ದೈವಿಕ ಯೋಜನೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ತೊಟ್ಟಂ ಚರ್ಚ್​ನ ಪ್ರಧಾನ ಧರ್ಮಗುರು ವಂ.ಡೆನಿಸ್​ ಡೆಸಾ ತಿಳಿಸಿದರು.

ಉಡುಪಿ ಮಲ್ಪೆಯಲ್ಲಿರುವ ತೊಟ್ಟಂ ಸಂತ ಅನ್ನಮ್ಮ ಚರ್ಚ್​ನ ಕುಟುಂಬ ಆಯೋಗದ ನೇತೃತ್ವದಲ್ಲಿ ಮಾ.19ರಂದು ಆಯೋಜಿಸಿದ್ದ ಅಪ್ಪಂದಿರ ದಿನಾಚರಣೆ ನಿಮಿತ್ತ ಪವಿತ್ರ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು.

ಮಕ್ಕಳಿಗೆ ಸದಾ ಭರವಸೆ

ಪ್ರತಿ ಕುಟುಂಬಗಳಲ್ಲಿಯೂ ತಂದೆಯ ಪಾತ್ರ ಮಹತ್ವದ್ದಾಗಿದೆ. ಅವರ ಜವಾಬ್ದಾರಿ, ನಿಷ್ಠೆ, ಪ್ರಾಮಾಣಿಕತನ, ದಾನ ಮತ್ತು ಕ್ಷಮಾಗುಣದಂತಹ ಪ್ರಮುಖ ಸಾಮರ್ಥ್ಯ ಗುರುತಿಸಬೇಕು. ಯಾವುದೇ ಸವಾಲು ಎದುರಾದಾಗಲೂ ಧೈರ್ಯವಾಗಿ ಎದುರಿಸಲು ತಂದೆ ತನ್ನ ಮಕ್ಕಳಿಗೆ ಸದಾ ಭರವಸೆಯ ವ್ಯಕ್ತಿಯಾಗಿರುತ್ತಾರೆ ಎಂದು ಫಾದರ್​ ಡೆನಿಸ್​ ಡೆಸಾ ತಿಳಿಸಿದರು.

ತಂದೆ ಕುರಿತು ಉಪನ್ಯಾಸ

ಕಲ್ಯಾಣಪುರದ ಮಿಲಾಗ್ರಿಸ್​ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್​ ಆಳ್ವ, ತಂದೆ ಕುರಿತು ಉಪನ್ಯಾಸ ನೀಡಿದರು. ಪ್ರೀತಿಯ ತಂದೆ ಮತ್ತು ಶ್ರದ್ಧಾಭರಿತ ಪತಿಯಾಗಿರುವಾಗ ಜೀವನದ ಸವಾಲುಗಳನ್ನು ಹೇಗೆ ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬ ಕುರಿತು ಅಮೂಲ್ಯ ಮಾಹಿತಿ ನೀಡಿದರು.

ಉಪಸ್ಥಿತರಿದ್ದ ಅಪ್ಪಂದಿರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು.

ಚರ್ಚ್​ನ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್​ ಫೆರ್ನಾಂಡಿಸ್​ ಉಪಸ್ಥಿತರಿದ್ದರು. ಕುಟುಂಬ ಆಯೋಗದ ಸಂಚಾಲಕ ಹೆರಾಲ್ಡ್​ ಡಿಸೋಜಾ ಸ್ವಾಗತಿಸಿದರು. ಧರ್ಮಪ್ರಾಂತ್ಯದ ಕುಟುಂಬ ಆಯೋಗದ ಕಾರ್ಯದರ್ಶಿ ಲೆಸ್ಲಿ ಆಯೋಗ ಕಾರ್ಯಕ್ರಮ ನಿರೂಪಿಸಿದರು.