ಜಿಲ್ಲೆ

ಪಿತೃಗಳು ಸಿರಿವಂತರಾಗಿದ್ದೂ ನಾವು ಬಡವರು

ವೀರೇಶ ಸೌದ್ರಿ

ಗೋಕರ್ಣ: ಪರಂಪರೆಯಿಂದ ನಮ್ಮ ಪಿತೃಗಳು ಜ್ಞಾನ ಭಂಡಾರದ ಆಗರ್ಭ ಶ್ರೀಮಂತರಾಗಿದ್ದೂ ಕಡುಬಡವರಾಗಿರುವವರು ನಾವು. ತಲೆಮಾರಿನ ಬಳುವಳಿಯಾಗಿ ಬಂದ ಅನುಪಮವಾದ ಖಗೋಳ ವಿಜ್ಞಾನ ನಮ್ಮ ಬಳಿಯಿದ್ದೂ ಆ ಭಾಗ್ಯವನ್ನು ನಮ್ಮದಾಗಿಸಿಕೊಳ್ಳದ ಹತಭಾಗ್ಯರಾಗಿದ್ದೇವೆ ಎಂದು ಇಲ್ಲಿನ 31ನೇ ಅನಾವರಣ ಚಾತುರ್ವಸ್ಯ ವ್ರತ ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ’ಕಾಲ’ ಸರಣಿ ಪ್ರವಚನದಲ್ಲಿ ಪಂಚಾಂಗ ಪಾವಿತ್ರ್ಯ ವಿವರಿಸಿದರು.

ಇಂದು ಬಳಕೆಯಾಗುತ್ತಿರುವ ಪಾಶ್ಚಿಮಾತ್ಯ ಕೊಡುಗೆಯ ಕ್ಯಾಲೆಂಡರ್ ಹಿಂದೆ ಯಾವುದೇ ವೈಜ್ಞಾನಿಕ ಮರ್ಮ ಅಥವಾ ಪ್ರಾಧಾನ್ಯವಿಲ್ಲ. ಜ್ಯೂಲಿಯಸ್ ಅಥವಾ ಅಗಸ್ಟಿಯಸ್ ಸೀಸರ್ ಮುಂತಾದ ದೊರೆಗಳ ಹೆಸರಲ್ಲಿ ಬಂದಂಥ ಇವುಗಳು ಮಾನವ ಒಡಂಬಡಿಕೆಯಿಂದ ಅನುಸರಿತವಾದವುಗಳು. ಆದರೆ, ನಮ್ಮ ಖಗೋಳ ಜ್ಞಾನ ಪ್ರಣೀತವಾಗಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂಬ ಐದು ಅಂಗಗಳಿಂದ ಶಾಸ್ತ್ರಬದ್ಧವಾಗಿ ವಿರಚಿತವಾದ ಕಾಲ ಗಣನೆಯ ಪಂಚಾಂಗದ ಪ್ರತಿ ಅಂಗವೂ ಜೀವನಕ್ಕೆ ಸಂಬಂಧಿತವಾದುದು.

ಸೂರ್ಯ ಚಂದ್ರರ ಅಂತರವನ್ನು ತಿಳಿಸುವ ತಿಥಿ ನಮ್ಮ ಸಂಪತ್ತಿಗೆ ಸಂಬಂಧಿತ. ವಾರ ನಮ್ಮ ಆಯುಷ್ಯವನ್ನು ಹೇಳುತ್ತದೆ. ನಕ್ಷತ್ರ ಆತ್ಮಶುದ್ಧಿ, ಜೀವಶುದ್ಧಿ ಮತ್ತು ಪಾಪಪುಣ್ಯಗಳ ಪರಿಹಾರದ ಪ್ರಕ್ರಿಯೆ. ನಾಲ್ಕನೆಯ ಅಂಗವಾದ ಯೋಗ ನಮ್ಮ ರೋಗ ಮತ್ತು ಆರೋಗ್ಯದ ಸಂಕೇತ. ಕರಣ ಕಾರ್ಯಸಿದ್ಧಿ ಇತ್ಯಾದಿಗಳನ್ನು ನಿಖರ ಪಡಿಸುತ್ತದೆ. ಅದೇ ಇಂದು ವ್ಯಾಪಕವಾಗಿ ಎಲ್ಲರಿಂದ ನಿತ್ಯ ಉಪಯೋಗಿತ ಕ್ಯಾಲೆಂಡರ್​ಗೆ ಇಂತಹ ಯಾವುದೇ ಪಾವಿತ್ರ್ಯ ಅಥವಾ ಜೀವದ ಜತೆಗಿನ ಅವಿನಾಭಾವ ಸಂಬಂಧ ಎನ್ನುವುದಿಲ್ಲ.ನಮ್ಮ ಪಿತೃಗಳ ಆಗರ್ಭ ದೇಣಿಗೆಯಾದ ಪಂಚಾಂಗದಂಥ ವಿಜ್ಞಾನದ ಭಾಗ್ಯವಂತರು ನಾವು! ಆದರೆ ಪರಮ ಅವಿವೇಕಿಗಳಾಗಿ, ಮೂರ್ಖತ್ವದಿಂದ ಅದನ್ನು ನಿತ್ಯ ಅನುಸರಿಸದೆ ಅದರ ಶುಭಫಲಗಳಿಗೆ ಭಾಜನರಾಗದವರಾಗಿದ್ದೇವೆ. ಕಾರಣ ಖಗೋಳ ವಿಜ್ಞಾನ ಆಧರಿತ ಇಂತಹ ಬದುಕನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಜೀವನವನ್ನು ಸುಖಕರವಾಗಿಸಿಕೊಳ್ಳಲು ಸಾಧ್ಯ. ಆ ಪ್ರಯತ್ನ, ಆ ಸಾಧನೆ ನಿಮ್ಮೆಲ್ಲರದಾಗಲಿ ಎಂದು ಶ್ರೀಗಳು ಹರಸಿದರು.

ಉಪ್ಪಿನಂಗಡಿ ಮಂಡಲದ ಆರು ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ಸಮರ್ಪಿತವಾಯಿತು.
ಸತತ 18ಸಾವಿರ ದಿನಗಳ ಮಳೆಯನ್ನು ದಾಖಲಿಸುತ್ತ ಬಂದ ಮಳೆತಜ್ಞ ಸತ್ಯನಾರಾಯಣ ಪ್ರಸಾದ ಅವರ ಸಾಧನೆಗಳನ್ನು ಶ್ರೀಮಠದ ಹಿರಿಯ ಸೇವಾನಿಷ್ಠ ಆನೇಕಾರ್ ಗಣಪಯ್ಯ ಅನಾವರಣಗೊಳಿಸಿದರು. ಈ ಬಗ್ಗೆ ಮಾತನಾಡಿದ ಶ್ರೀಗಳು, ಸತ್ಯನಾರಾಯಣ ಅವರ ಪ್ರಕೃತಿ ಪರಿವೀಕ್ಷಣೆ ಮತ್ತು ಸಾಧನೆ ಅನನ್ಯವಾದುದು ಎಂದರು.

ಹವ್ಯಕ ಮಹಾಮಂಡಲದ ಉದಯಶಂಕರ ಭಟ್ಟ ಮಿತ್ತೂರು, ಉಪ್ಪಿನಂಗಡಿ ಮಂಡಲಾಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ ಕುದುಪುಲ, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಕೋಶಾಧ್ಯಕ್ಷ ಸುಧಾಕರ ಬಡಗಣಿ ಮತ್ತಿತರರಿದ್ದರು. ಲೋಹಿತ್ ಹೆಬ್ಬಾರ ಕಾರ್ಯಕ್ರಮ ನಿರ್ವಹಿಸಿದರು.