ವಿಜಯವಾಣಿ ಸುದ್ದಿಜಾಲ ಮಂಗಳೂರು
ಜನರ ಆರೋಗ್ಯದ ಸುಧಾರಣೆಗಾಗಿ ವಿವಿಧ ಚಿಕಿತ್ಸಾ ವಿಧಾನಗಳನ್ನು ಅನ್ವಯಿಸುವುದು ಮುಖ್ಯವಾಗಿದೆ. ಹೋಮಿಯೋಪತಿ ವೈದ್ಯರು ನಿರಂತರ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಈ ಕ್ಷೇತ್ರದಿಂದ ಸಮುದಾಯಕ್ಕೆ ಹೆಚ್ಚಿನ ಸಹಾಯ ದೊರೆಯುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ‘ರೂಬಿಕಾನ್ 2024’ ವನ್ನು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೋಮಿಯೋಪತಿಯನ್ನು ಸಾಮಾನ್ಯವಾಗಿ ಪರ್ಯಾಯ ವೈದ್ಯಕೀಯ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ದೀರ್ಘಕಾಲದ ಅನೇಕ ಕಾಯಿಲೆಗಳಿಗೆ ಹೋಮಿಯೋಪತಿಯಿಂದ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗುತ್ತಿದೆ ಎಂದ ಸಚಿವರು, ಸಾಂಕ್ರಾಮಿಕವಲ್ಲದ ರೋಗಗಳ ಪ್ರಕರಣಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಜನರ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಇದೇ ವೇಳೆ ಯುವಜನರು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಮಂಗಳೂರಿನ ಫಾದರ್ ಮುಲ್ಲರ್ ಸಂಸ್ಥೆಯು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ ದೇಶದ ಅತ್ಯಂತ ಹಳೇ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾಗಿದ್ದು, ಉದಾತ್ತವಾದ ಸೇವಾ ಪರಂಪರೆಯನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ.ಅನಿಲ್ ಖುರಾನಾ ಅವರು ಮಾತನಾಡಿ, ಭಾರತದಲ್ಲಿ 3,60,000 ಹೋಮಿಯೋಪತಿ ವೈದ್ಯರಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು. ಆಯೋಗವು ಕ್ಷೇತ್ರದಲ್ಲಿ ಸಾಕ್ಷ್ಯಾಧಾರಿತ ಅಧ್ಯಯನಗಳನ್ನು ಸುಗಮಗೊಳಿಸುತ್ತಿದೆ ಎಂದರು.
ಸಚಿವರು ಕಾಲೇಜಿನ ವಾರ್ಷಿಕ ಮ್ಯಾಗಜಿನ್ ಪಯೋನಿಯರ್ 2024 ಮತ್ತು ರಿಸರ್ಚ್ ಬುಲೆಟಿನ್ 2024 ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅವರು, ವೈದ್ಯಕೀಯ ಮೌಲಮಾಪನ ಮತ್ತು ಹೋಮಿಯೋಪಥಿಯ ರೇಟಿಂಗ್ ಬೋರ್ಡ್ ಎ- ಪ್ಲಸ್ ರೇಟಿಂಗ್ ಒದಗಿಸಿದೆ. ಆಕಾಂಕ್ಷಿ ವಿಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಹೋಮಿಯೋಪಥಿ ಕೌನ್ಸಿಲ್ ಪರಿಗಣಿಸಬೇಕು ಎಂದು ಹೇಳಿದರು.
ಫಾ. ಮುಲ್ಲರ್ ಹೋಮಿಯೋಪತಿ ಫಾರ್ಮಸೂಟಿಕಲ್ ಡಿವಿಜನ್‌ನ ಆಡಳಿತಾಧಿಕಾರಿ ವಂ.ನೆಲ್ಸನ್ ಡಿ. ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ. ಅಶ್ವಿನ್ ಎಲ್. ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಲ್ಮಾ ಮೀರಾ ಡಿಸೋಜ, ಫಾ. ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನಾವಡ ಮತ್ತು ಹೋಮಿಯೋಪಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ರಂಜನ್ ಸಿ.ಬ್ರಿಟ್ಟೊ ಉಪಸ್ಥಿತರಿದ್ದರು.
2 ದಿನಗಳ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನದಲ್ಲಿ ಮುಂಬೈನ ಪ್ರೆಡಿಕ್ಟಿವ್ ಹೋಮಿಯೋಪತಿ ಇದರ ಆಡಳಿತ ನಿರ್ದೇಶಕ ಡಾ.ಅಂಬರಿಶ್ ವಿಜಯಕರ್, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ, ಕಲ್ಕತ್ತಾ ಇದರ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ.ಕುಮಾರವೆಲ್ ವಿ. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಫಾ. ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ಫಾವುಸ್ತಿನ್ ಎಲ್.ಲೋಬೊ ಸ್ವಾಗತಿಸಿದರು. ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ ಪ್ರಭು ಕಿರಣ್ ವಂದಿಸಿದರು. ಡಾ. ದೀಪಾ ಪಾಯಸ್ ಮತ್ತು ಡಾ.ಮನೀಶ್ ಕುಮಾರ್ ತಿವಾರಿ ಕಾರ್ಯಕ್ರಮ ನಿರೂಪಿಸಿದರು.
--------
ಮುಂದಿನ ವರ್ಷ ಹೋಮಿಯೋಪತಿಯಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪರಿಚಯಿಸಲಾಗುವುದು. ಹೋಮಿಯೋಪತಿ ಕೋರ್ಸ್‌ಗಳನ್ನು ನೀಡುವ 270 ಕಾಲೇಜುಗಳು ಮತ್ತು ವಿಷಯಕ್ಕೆ ಮೀಸಲಾದ 32 ಸಂಶೋಧನಾ ಕೇಂದ್ರಗಳಿವೆ. 400 ಪ್ರಮಾಣೀಕೃತ ಕಂಪನಿಗಳು ಹೋಮಿಯೋಪತಿ ಔಷಧವನ್ನು ತಯಾರಿಸುತ್ತಿವೆ ಕೋವಿಡ್ -19 ವೈರಸ್ ಚಿಕಿತ್ಸೆಯಲ್ಲಿ ಹೋಮಿಯೋಪತಿ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ.
* ಡಾ.ಅನಿಲ್ ಖುರಾನಾ,
ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷರು