ಪುತ್ತೂರು ಗ್ರಾಮಾಂತರ: ಪಡಿತರ ಅಕ್ಕಿ ಮಾರಾಟ ಮಾಡಿರುವುದನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿ ತನ್ನ ಪುತ್ರನಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ, ಕೆದಂಬಾಡಿ ಗ್ರಾಮದ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆದಂಬಾಡಿ ಗ್ರಾಮದ ಇದ್ಪಾಡಿ ನಿವಾಸಿ ಚೋಮ(65) ನಾಪತ್ತೆಯಾದವರು. ತನ್ನ ಪುತ್ರ ಪುರಂದರ ಅವರು ಪಡಿತರ ಅಕ್ಕಿ ಮಾರಾಟ ಮಾಡಿರುವುದನ್ನು ಕೇಳಿದ ವಿಚಾರದಲ್ಲಿ ಸೆ.3ರಂದು ಸಂಜೆ ಚೋಮ ಮತ್ತು ಆತನ ಎರಡನೇ ಪುತ್ರ ರವಿ ಎಂಬುವರು ಸೇರಿಕೊಂಡು ಪುರಂದರ ಅವರಿಗೆ ಹಲ್ಲೆ ನಡೆಸಿದ್ದರು. ಅದೇ ದಿನ ಸಂಜೆ ಹಲ್ಲೆಗೊಳಗಾಗಿದ್ದ ಪುರಂದರ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.
ಪುರಂದರ ಅವರಿಗೆ ಚೋಮ ಮತ್ತು ರವಿ ಸೇರಿಕೊಂಡು ಹಲ್ಲೆ ನಡೆಸಿರುವ ಕುರಿತು ಸೆ.4ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುರಂದರ ಅವರನ್ನು ಸೆ.3ರಂದು ಸಂಜೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮನೆಯಲ್ಲೇ ಇದ್ದ ಚೋಮ ಆ ಬಳಿಕ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಚೋಮ ನಾಪತ್ತೆಯಾಗಿರುವ ಕುರಿತು ಪತ್ನಿ ಸುಶೀಲಾ ದೂರು ನೀಡಿದ್ದಾರೆ.