ರಿಪ್ಪನ್ಪೇಟೆ: ಸಮೀಪದ ವರನಹೊಂಡದ ಬಳಿ ಬೈಕ್ ಹಾಗೂ ಪಿಕ್ಅಪ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಅಪ್ಪ-ಮಗಳು ಮೃತಪಟ್ಟಿದ್ದಾರೆ.
ಶುಕ್ರವಾರ ಸಂಜೆ 4.30ರ ಸಮಯದಲ್ಲಿ ಶಾರದಾ ರಾಮಕೃಷ್ಣ ಶಾಲೆಯಿಂದ ಮಕ್ಕಳನ್ನು ತಂದೆ ರಾಘವೇಂದ್ರ (45) ತನ್ನ ಊರಾದ ಬಿದರಹಳ್ಳಿ ಸಮೀಪ ಚಿಟ್ಟೆಗದ್ದೆಗೆ ಕರೆದುಕೊಂಡು ಹೋಗುತ್ತಿರುವಾಗ ತೀರ್ಥಹಳ್ಳಿ ರಸ್ತೆಯ ವರನಹೊಂಡದ ಸಮೀಪ ರಿಪ್ಪನ್ಪೇಟೆ ಕಡೆ ಬರುತ್ತಿದ್ದ ಪಿಕ್ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಸಾಹಿತ್ಯ ಸ್ಥಳದಲ್ಲೇ ಮೃತಪಟ್ಟಿದ್ದು ತಂದೆ ರಾಘವೇಂದ್ರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟರು. ಇನ್ನೊಬ್ಬ ಮಗಳು ಸಂರಕ್ಷಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಪಘಾತಕ್ಕೆ ಕಾರಣವಾದ ಪಿಕ್ಅಪ್ ವಾಹನ ಚಾಲಕನ್ನು ಬಂಧಿಸಲಾಗಿದ್ದು, ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಲ್ಲಿದ್ದ ಮಕ್ಕಳ ಕರೆದ ತಂದೆ! ಪ್ರತಿದಿನ ಶಾಲೆಗೆ, ಶಾಲಾ ವಾಹನದಲ್ಲಿ ಮಕ್ಕಳು ಹೋಗಿ ಬರುತ್ತಿದ್ದರು. ಶುಕ್ರವಾರ ಕಾರ್ಯನಿಮಿತ್ತ ರಿಪ್ಪನ್ಪೇಟೆಗೆ ಬಂದಿದ್ದ ರಾಘವೇಂದ್ರ ಬಸ್ಸಿನಲ್ಲಿ ಊರಿಗೆ ಸಾಗುತ್ತಿದ್ದ ಮಕ್ಕಳನ್ನು ಕೆಳಗಿಳಿಸಿಕೊಂಡು ಬೈಕಿನಲ್ಲಿ ಕರೆದೊಯ್ಯುತ್ತಿದ್ದಾಗ ತಂದೆ ಮಗಳನ್ನು ಜವರಾಯ ಅಪಘಾತದ ಮೂಲಕ ತನ್ನ ಪಾಶಕ್ಕೆ ಸೆಳೆದುಕೊಂಡಿದ್ದಾನೆ.
ಪ್ರಥಮ ಚಿಕಿತ್ಸೆಗೂ ವೈದ್ಯರಿಲ್ಲದ ಆಸ್ಪತ್ರೆ ನಮಗೇಕೆ? ಅಪಘಾತಕ್ಕೊಳಗಾದ ವ್ಯಕ್ತಿ ಸತ್ತಿದ್ದಾನೆಯೋ? ಬದುಕಿದ್ದಾನೆಯೋ? ಎನ್ನುವ ಬಗ್ಗೆ ಅರಿಯಲು ಶಿವಮೊಗ್ಗಕ್ಕೆ ತೆರಳಬೇಕಾದ ಅನಿವಾರ್ಯತೆ ಇದ್ದರೆ ಈ ಆಸ್ಪತ್ರೆ ನಮಗೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಎದುರು ಪ್ರತಿಭಟನೆ ನಡೆಸಿದರು.
ಸಮೀಪದ ವರನಹೊಂಡದಲ್ಲಿ ಅಪಘಾತಕ್ಕೊಳಗಾದ ಗಾಯಾಳುಗಳನ್ನು ತುರ್ತವಾಹನದಲ್ಲಿ ಪಟ್ಟಣದ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಯಾವುದೇ ವೈದ್ಯರಿರಲಿಲ್ಲ. ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಸಂಬಂಧಿಕರು ಶುಶ್ರೂಷಕ ಸಿಬ್ಬಂದಿಯಲ್ಲಿ ಪ್ರಶ್ನಿಸಿದಾಗ ವೈದ್ಯರೇ ದೃಢೀಕರಿಸಬೇಕು. ಇದರಿಂದ ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ ಪರಿಣಾಮ ದಿಕ್ಕು ತೋಚದಂತಾದ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಇಲ್ಲಿನ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದನ್ನು ಜನಪ್ರತಿನಿಧಿಗಳಿಗೆ ತಿಳಿಸಿದರೆ ಯಾವುದೇ ಪ್ರಯೋಜನವೂ ಆಗಿಲ್ಲ. ವೈದ್ಯರ ಮರ್ಜಿಯಲ್ಲಿರುವ ರಾಜಕಾರಣಿಗಳು ಪ್ರತಿ ಭಾರಿ ಅವಘಡ ಸಂಭವಿಸಿದಾಗಲೂ ವೈದ್ಯರನ್ನು ಬದಲಾಯಿಸುವ ಭರವಸೆ ನೀಡಿ ಮತ್ತೆ ಇಲ್ಲಿಯೇ ಉಳಿಸುತ್ತಾರೆ. ಡಾಕ್ಟರ್ನ್ನು ಪದೇಪದೆ ಉಳಿಸುವವರ ಮಕ್ಕಳು ಹಾಗೂ ಸಂಬಂಧಿಕರಿಗೆ ಹೀಗೆ ಆಗಲಿ. ಆಗ ಅವರಿಗೆ ಸಾವಿನ ನೋವು ಏನೆಂದು ಗೊತ್ತಾಗುತ್ತದೆ ಎಂದು ಹಿಡಿಶಾಪ ಹಾಕಿದರು.
ಒಂದು ಗಂಟೆಗೂ ಅಧಿಕ ಕಾಲ ಆಸ್ಪತ್ರೆ ಮುಂಭಾಗದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆ ವೈಫಲ್ಯದ ವಿರುದ್ಧ ಘೊಷಣೆ ಕೂಗಿದ ಪ್ರತಿಭಟನಾಕಾರರು ಕೂಡಲೆ ವೈದ್ಯರನ್ನು ಬದಲಾಯಿಸಿ ಹಗಲು ರಾತ್ರಿ ಕಾರ್ಯನಿರ್ವಹಿಸುವ ಇಬ್ಬರು ವೈದ್ಯರನ್ನು ನಿಯೋಜನೆ ಮಾಡುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಸ್ಥಳಕ್ಕಾಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಸುರೇಶ್ ಸೋಮವಾರದಿಂದ ಹಾಲಿ ಕರ್ತವ್ಯದಲ್ಲಿರುವ ವೈದ್ಯರನ್ನು ಬದಲಾಯಿಸಿ ಹೊಸದಾಗಿ ವೈದ್ಯರನ್ನು ನೇಮಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಕುಕ್ಕಳಲೆ ಈಶ್ವರಪ್ಪ ಗೌಡ, ನಾಸೀರ್ ಅಹಮದ್, ಕಗ್ಗಲಿ ಲಿಂಗಪ್ಪ, ಶ್ರೀಧರ್, ಸುಲೇಮಾನ್, ಲೀಲಾಶಂಕರ್, ಸá-ಧೀಂದ್ರ ಪೂಜಾರಿ, ನಾಗರಾಜ್, ಶ್ರೀನಿವಾಸಾಚಾರ್, ಉಮೇಶ್ ಗೌಡ, ವೆಲ್ಡಿಂಗ್ ಮಾಮು ಇತರರಿದ್ದರು.