ಜಿಲ್ಲೆ

ಅ.6ರಂದು ದೇವಾಲಯ ಸರ್ಕಾರದ ಹಿಡಿತದಿಂದ ಮುಕ್ತಿಗಾಗಿ ಉಪವಾಸ ಸತ್ಯಾಗ್ರಹ

ಮಂಗಳೂರು: ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ವಿಶ್ವಹಿಂದೂ ಪರಿಷತ್ ಅಭಿಯಾನ ಕೈಗೆತ್ತಿಕೊಳ್ಳುತ್ತಿದೆ. ಅ.6ರಂದು ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಸನ್ನಿಧಾನದಲ್ಲಿ ಉಪವಾಸ ಸತ್ಯಾಗ್ರಹದೊಂದಿಗೆ ಅಭಿಯಾನ ಆರಂಭಗೊಳ್ಳಲಿದೆ ಎಂದು ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ತಿಳಿಸಿದ್ದಾರೆ.

ಕದ್ರಿಯಲ್ಲಿರುವ ವಿಹಿಂಪ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.6ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಈ ಉಪವಾಸ ಸತ್ಯಾಗ್ರಹದಲ್ಲಿ ನಾಡಿನ ಸ್ವಾಮೀಜಿಗಳು, ಹಿಂದೂ ಧಾರ್ಮಿಕ ಮುಖಂಡರು, ದೇವಾಲಯಗಳ, ಮಠಮಂದಿರಗಳ ಹಾಲಿ, ಮಾಜಿ ಆಡಳಿತ ಮೊಕ್ತಸರುಗಳು, ಹಿಂದೂ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ ಎಂದರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ (ಎ ಗ್ರೇಡ್ ಬಿ ಗ್ರೇಡ್ ಹಾಗೂ ಸಿ ಗ್ರೇಡ್ ) ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ವಿಮುಕ್ತಿಗೊಳಿಸಲು ಹಾಗೂ ಹಿಂದೂ ಸ್ವಾಯತ್ತೆ ಮಂಡಳಿಯನ್ನು ರಚಿಸಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಹಿಂದಿರುಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಹಿಂದೂ ಧಾರ್ಮಿಕ ಚಟುವಟಿಕೆಗಳು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ವೈವಿಧ್ಯತೆಯನ್ನು ಹೊಂದಿದೆ. ಹಿಂದೂ ಧಾರ್ಮಿಕ ನಂಬಿಕೆ ವೈವಿಧ್ಯತೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಹಾಗೂ ಪ್ರಸಾರಕ್ಕಾಗಿ ದೇವಾಲಯಗಳನ್ನು ಸರಕಾರದ ಕಪಿಮುಷ್ಠಿಯಿಂದ ಹೊರ ತರುವುದು ಅನಿವಾರ್ಯವಾಗಿದೆ. ಅಲ್ಲದೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಚುನಾಯಿತ ಸರಕಾರ ವ್ಯಾಪಾರ ಕೇಂದ್ರಗಳಂತೆ ನಡೆಸುತ್ತಿರುವುದು ಹಿಂದೂಗಳ ಮನಸ್ಸಿಗೆ ಘಾಸಿಯನ್ನುಟುಮಾಡಿದೆ ಮಾಡಿದೆ ಎಂದರು.

ಪುರಾತನ ಕಾಲದಿಂದಲೂ ಭಾರತವು ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ತನ್ನ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು ಸರ್ಕಾರದ ಆಡಳಿತಕ್ಕೆ ಒಳಪಟ್ಟವು. ಸರ್ಕಾರವು ಸರ್ವ ಜಾತಿ - ಧರ್ಮಗಳ ಒಳಗೊಳ್ಳುವಿಕೆಯಿಂದ ಆಯ್ಕೆಗೊಳಿಸಲ್ಪಡುವ ಸಂಸ್ಥೆಯಾಗಿದೆ. ಹಿಂದೂ ದೇವಾಲಯಗಳು ಮತ್ತು ಅದರ ಸ್ವತ್ತುಗಳು ಜಾತ್ಯತೀತ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲ್ಪಟ್ಟಿದೆ. ಇದರಿಂದಾಗಿ ಹಿಂದುಗಳ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆಯುಂಟಾಗಿದೆ ಎಂದು ಕೃಷ್ಣ ಪ್ರಸನ್ನ ಹೇಳಿದರು.

ವಿಹಿಂಪ ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್, ಗೋಪಾಲ ಕುತ್ತಾರ್, ಪುತ್ತೂರು ಜಿಲ್ಲಾ ಕಾರ್ಯದರ್ಶಿ, ಷಷ್ಠಿಪೂರ್ತಿ ಸಮಾರೋಪ ಅಧ್ಯಕ್ಷ ಡಾ.ಎಂ.ಧಯಾಕರ್ ಉಪಸ್ಥಿತರಿದ್ದರು.