ವಿಜಯಪುರ: ದೆಹಲಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕಿಯೇತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಕರ್ನಾಟಕದಲ್ಲಿ ಡಿ.6 ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ, ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ ತಿಳಿಸಿದರು.
ನ. 26 ರಿಂದ ದೇಶದ ರೈತರ ಹಿತಕ್ಕಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8 ದಿನಕ್ಕೆ ಕಾಲಿಟ್ಟಿದೆ. ಪರಿಸ್ಥಿತಿ ಗಂಭೀರವಾಗಿದೆ. ದಲೈವಾಲರ ಉಪವಾಸ ಬೆಂಬಲಿಸಿ ಕರ್ನಾಟಕದ ರೈತ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೇಂದ್ರ ಸರ್ಕಾರ ಚಳುವಳಿ ನಿರತ ಮುಖಂಡರ ಜೊತೆ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ರೈತರನ್ನು ಉಳಿಸಬೇಕು ಎಂದು ಎಚ್ಚರಿಸುತ್ತಿದ್ದೇವೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು ಮತ್ತು ಡಾ. ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಫಸಲ್ ಬಿಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಂದು ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಇಂತಹ ರೈತ ಮುಖಂಡರನ್ನು ದೇಶದ್ರೋಹಿಗಳು, ಕಳ್ಳ ಕಾಕರ ರೀತಿಯಲ್ಲಿ ಮಧ್ಯರಾತ್ರಿ ಬಂಧಿಸಿ ದೇಶದ ರೈತರಿಗೆ ಅಪಮಾನ ಮಾಡಿದ್ದಾರೆ. ನೂರಾರು ರೈತರು ಕನೋರಿ ಬಾರ್ಡರ್‌ನಲ್ಲಿ ಉಪವಾಸ ಕುಳಿತಿದ್ದಾರೆ. ಈ ಸತ್ಯಾಗ್ರಹ 8ನೇ ದಿನಕ್ಕೆ ಮುಂದುವರೆದಿದೆ. ಸರ್ಕಾರ ರೈತರ ಹಕ್ಕನ್ನು ದಮನ ಮಾಡಲು ಯತ್ನಿಸುತ್ತಿದೆ. ಸರ್ಕಾರದ ವರ್ತನೆಯನ್ನು ಖಂಡಿಸುವುದಾಗಿ ತಿಳಿಸಿದರು.
ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ರೈತ ಚಳುವಳಿಯ ಬಗ್ಗೆ ವರದಿ ನೀಡಲು ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಹಾಗೂ ಪರಿಣಿತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ನವೆಂಬರ್ 22 ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆರಂಭಿಕ ವರದಿಯನ್ನು ನೀಡಿದೆ. ಆ ಪ್ರಕಾರ ರೈತರ ಆತ್ಮಹತ್ಯೆಗೆ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿಲ್ಲದಿರುವುದೇ ಕಾರಣ ಮತ್ತು ಉತ್ಪಾದನೆ ವೆಚ್ಚಕ್ಕೆ ಬೆಂಬಲ ಬೆಲೆ ಕಡಿಮೆ ಇರುವುದೇ ಕಾರಣ ಎಂದು ತಿಳಿಸಲಾಗಿದೆ. ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ವರದಿ ನೀಡಿದೆ. ಈ ವರದಿ ನೀಡಿದ ಎರಡು ಮೂರು ದಿನದಲ್ಲಿ ಕೇಂದ್ರ ಸರ್ಕಾರ ರೈತ ಚಳುವಳಿಯನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದರು.
ಕೇಂದ್ರ ಬಜೆಟ್‌ನಲ್ಲಿ ರೈತರ ಸಾಲವನ್ನು ಶೇ.16ಕ್ಕೆ ಏರಿಕೆ ಮಾಡಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಣೆ ಮಾಡಿದರು. ಆದರೆ ಈಗ ನಬಾರ್ಡ್ ಮೂಲಕ ಸಹಕಾರ ಸಂಘಗಳಲ್ಲಿ ರೈತರಿಗೆ ಕೊಡುತ್ತಿದ್ದ ಬಡ್ಡಿ ರಹಿತ ಸಾಲ ಕಡಿವಾಣ ಹಾಕಲು ಶೇ. 50ರಷ್ಟು ಅನುದಾನ ಕಡಿತ ಮಾಡಿದ್ದಾರೆ. ಇದು ರೈತರಿಗೆ ಸಹಕಾರ ಸಂಘಗಳಲ್ಲಿ ನೀಡುತ್ತಿದ್ದ ಬಡ್ಡಿ ರಹಿತ ಕೃಷಿ ಸಾಲ ತಪ್ಪಿಸುವ ಹುನ್ನಾರವಾಗಿದೆ. ರಾಜ್ಯದ ರೈತರಿಗೆ ಮರ್ಮಾಘಾತ ವಾಗಿದೆ. ರಾಜ್ಯದ ಸಂಸದರಿಗೆ ರೈತರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರ ಕಡಿತ ಮಾಡಿರುವ ಶೇ.50 ರಷ್ಟು ರಾಜ್ಯದ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಗುಂದಗಿ, ತಾಲೂಕಾಧ್ಯಕ್ಷ ಧರೆಪ್ಪಗೌಡ ಬಿರಾದಾರ, ಅನ್ನದಾತ ಯುವ ರೈತ ಸಂಘದ ಅಧ್ಯಕ್ಷ ಸುರೇಶ ಗರಸಂಗಿ, ಮಹಾಂತೇಶ ಕೆಲೋಟಗಿ. ಕುಮಾರ ಕಿಳೆಗಾವಿ, ಪಾಂಡು ದಳವಾಯಿ ಮತ್ತಿತರರಿದ್ದರು.