ಹುಣಸೂರು: ಗಿರಿಜನರಿಗೆ ಒಳಮೀಸಲಾತಿ, ಪ್ರೊ.ಅಸ್ಸಾದಿ ವರದಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ಆದಿವಾಸಿಗಳು ಗಾಂಧಿ ಜಯಂತಿ ದಿನವಾದ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ನಗರದ ಸಂವಿಧಾನ ವೃತ್ತದಲ್ಲಿ ಬುಧವಾರ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ಕೈಗೊಂಡ ಗಿರಿಜನರು, ನ್ಯಾಯಯುತ ಬೇಡಿಕೆಗಳು ಈಡೇರಲಿ, ಈ ನೆಲದ ಮೂಲನಿವಾಸಿಗಳು ಬದುಕಲು ಅವಕಾಶ ನೀಡಿರಿ ಎಂದು ಘೋಷಣೆಗಳನ್ನು ಕೂಗಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, 2014ರಲ್ಲಿ ರಾಜ್ಯ ಹೈಕೋರ್ಟ್ ಪ್ರೊ.ಮುಜಾಫರ್ ಅಸ್ಸಾದಿ ವರದಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ನೀಡಿದ್ದ ಆದೇಶ ಇಂದಿಗೂ ಪಾಲನೆಯಾಗಿಲ್ಲ. ವರದಿಯನ್ವಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಹಾಕಲ್ಪಟ್ಟ, ನ್ಯಾಯಾಲಯದಿಂದ ರಚಿಸಲ್ಪಟ್ಟ ಪ್ರೊ.ಅಸ್ಸಾದಿ ಸಮಿತಿ ಗುರುತಿಸಿರುವ 3418 ಆದಿವಾಸಿ ಕುಟುಂಬಗಳಿಗೆ ತಲಾ 5 ಎಕರೆ ಭೂಮಿ ಮತ್ತು 15 ಲಕ್ಷ ರೂ.ಗಳ ಅಭಿವೃದ್ಧಿ ಪ್ಯಾಕೇಜ್‌ನೊಂದಿಗೆ ಪುನರ್ವಸತಿ ಕೈಗೊಳ್ಳಬೇಕಿದ್ದ ಸರ್ಕಾರಗಳು ಇಂದಿಗೂ ಹೈಕೋರ್ಟ್ ಆಜ್ಞೆಯನ್ನು ಕಡೆಗಣಿಸಿರುವುದು ಖಂಡನೀಯ. ಈ ಕೂಡಲೇ ಪ್ರೊ.ಅಸ್ಸಾದಿ ವರದಿ ಅನ್ವಯ ಪುನರ್ವಸತಿ ಕೈಗೊಳ್ಳಲಿ. ತಿಂಗಳೊಳಗೆ ಜಿಲ್ಲಾಡಳಿತ ಸಭೆ ನಡೆಸಿ ಕ್ರಮವಹಿಸದಿದ್ದರೆ ಮೈಸೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮೈಸೂರು-ಕೊಡಗು ಬೆಟ್ಟಕುರುಬರ ಪಾರಂಪರಿಕ ಸೇವಾ ಸಂಘದ ಬಿ.ಎಸ್. ವಿಠಲ್ ನಾಣಾಚ್ಚಿ ಮಾತನಾಡಿ, ದೇಶದ ಉಚ್ಚ ನ್ಯಾಯಾಲಯ ಇತ್ತೀಚಿನ ಆದೇಶದನ್ವಯ ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ಅರಣ್ಯವಾಸದ ಹಿನ್ನೆಲೆ ಹೊಂದಿರುವ ಬುಡಕಟ್ಟುಗಳಿಗೆ ಹಾಗೂ ಮೂಲನಿವಾಸಿ ಬುಡಕಟ್ಟುಗಳಿಗೆ ಒಳಮೀಸಲಾಗಿ ನಿಗದಿಪಡಿಸಬೇಕು. ಬುಡಕಟ್ಟು ಅರಣ್ಯ ಹಕ್ಕು ಕಾಯ್ದೆಯನ್ವಯ ಜಿಲ್ಲೆಯ 5 ತಾಲೂಕುಗಳ 224 ಆದಿವಾಸಿ ಹಾಡಿಗಳಿಗೂ ಸಾಮೂಹಿಕ ಅರಣ್ಯ ಹಕ್ಕು ನೀಡಬೇಕು. 13,100 ಕುಟುಂಬಗಳ ಪೈಕಿ 7,100 ಕುಟುಂಬಗಳು ವೈಯಕ್ತಿಕ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು, 5,150 ಅರ್ಜಿಗಳನ್ನು ತಿರಸ್ಕರಿಸಿರುವುದು ಅನ್ಯಾಯವಾಗಿದೆ. ಅರಣ್ಯಹಕ್ಕುಗಳನ್ನು ಇತ್ಯರ್ಥ ಮಾಡುವವರೆಗೆ ಗಿರಿಜನರಿಗೆ, ಪೂರ್ವಜರು ವಾಸಿಸಿದ್ದ ನೆಲಸುಗಳ ಮೇಲಿನ ಹಕ್ಕುಗಳನ್ನು ಮಾನ್ಯ ಮಾಡಬೇಕು. ನೆಲಸುಗಳಿಗೆ ಹೋಗಲು, ಸ್ಮಶಾನ, ಪೂಜಾ ಸ್ಥಳಗಳನ್ನು ಬಳಸಲು, ಕಾಡಿನ ಕಿರುಉತ್ಪನ್ನಗಳಾದ ಜೇನು, ಸೊಪ್ಪು, ಕಳಲೆ, ಗಿಡಮೂಲಿಕೆ ಔಷಧಗಳನ್ನು ತರಲು ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದರು.
ದಲಿತ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಗಿರಿಜನರ ಬದುಕು ಮೂರಾಬಟ್ಟೆಯಾಗಿದ್ದು, ಶೋಷಿತ ಸಮಾಜಗಳ ಕುರಿತು ಆಡಳಿತ ನಡೆಸುವ ಸರ್ಕಾರಗಳಿಂದ ಕಡೆಗಣನೆ ಮಾಡುತ್ತಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಕಿಡಿಕಾರಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಸಿದ್ದೇಗೌಡ ಮಾತನಾಡಿ, ಸಂವಿಧಾನ ಸಮಾನತೆಯನ್ನು ಸಾರಿದೆ. ಗಾಂಧೀಜಿ ಸಮಾನತೆಗಾಗಿ ಕ್ರಾಂತಿಕಾರಿ ಕ್ರಮಗಳನ್ನು ಅನುಸರಿಸಿದರು. ಆದರೆ ಇಂದಿನ ಸರ್ಕಾರಗಳು ಕಾಡಿನಿಂದ ಹೊರದಬ್ಬಿಸಿಕೊಂಡಿರುವ ಆದಿವಾಸಿಗಳನ್ನು ಅತಂತ್ರ ಸ್ಥಿತಿಯಲ್ಲಿಟ್ಟಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ ವಿಜಯಕುಮಾರ್‌ಗೆ ಮನವಿ ಪತ್ರ ಸಲ್ಲಿಸಿ ಉಪವಾಸ ಸತ್ಯಾಗ್ರಹವನ್ನು ಸಮಾಪ್ತಿಗೊಳಿಸಲಾಯಿತು. ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ, ನಾಗರಹೊಳೆ ಹಕ್ಕು ಸ್ಥಾಪನ ಸಮಿತಿ ಜಿಲ್ಲಾ ಸಂಚಾಲಕ ಜಿ.ಕೆ.ತಿಮ್ಮ, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷ ಗಿರಿಜಾ, ಎಚ್.ಡಿ.ಕೋಟೆಯ ರಾಜು, ಗಣೇಶ್ ಮಾಸ್ಟ್ರು, ರಾಜಣ್ಣ, ಜೆ.ಡಿ.ಜಯಪ್ಪ, ಹನೂರು ಮುತ್ತಯ್ಯ, ವನವಾಸಿ ಕಲ್ಯಾಣ ಸಂಘದ ಪದಾಧಿಕಾರಿ ಕನಕಪುರದ ರಾಜು ಇತರರು ಇದ್ದರು.