ಮಂಗಳೂರು: ಕದ್ರಿಜೋಗಿಮಠದಲ್ಲಿ ಶ್ರೀ ಕಾಲ ಬೈರವ ದೇವರ ಮೂಲಮೂರ್ತಿ ಪ್ರತಿಷ್ಠಾಪಿಸುವಂತೆ ಒತ್ತಾಯಿಸಿ ರವಿವಾರ ಜೋಗಿ ಸಮಾಜದ ಬಂಧುಗಳಿಂದ ಉಪವಾಸ ಸತ್ಯಾಗ್ರಹ ನಡೆಯಿತು.
ಕದ್ರಿ ಜೋಗಿಮಠ ಹಿತರಕ್ಷಣಾ ಸಮಿತಿ ದಕ್ಷಿಣ ಕನ್ನಡ ಜೋಗಿ ಸಮಾಜ ಸುಧಾರಕ ಸಂಘ, ಕದ್ರಿ ಶ್ರೀ ಜೋಗಿಮಠ ಜೀರ್ಣೋದ್ಧಾರ ಮತ್ತು ನಿರ್ವಹಣಾ ಸಮಿತಿ ಇದರ ಆಶ್ರಯದಲ್ಲಿ ಪ್ರತಿಭಟನೆ ನಡೆದಿದ್ದು, ನೂರಾರು ಮಂದಿ ಭಾಗವಹಿಸಿದ್ದರು.
ಕದ್ರಿ ಜೋಗಿ ಮಠದ ಜಿರ್ಣೋದ್ಧಾರ ಮತ್ತು ಕಾರ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಹರಿನಾಥ್ ಎಂ. ಮಾತನಾಡಿ, ಕಾಲಭೈರವದೇವರಿಗೆ ಬ್ರಹ್ಮಕಲಶೋತ್ಸವ ಹಾಗೂ ಮೂರ್ತಿ ಪುನಃ ಪ್ರತಿಷ್ಠಾಪನೆ ಕಳೆದ ಫೆಬ್ರವರಿಯಲ್ಲಿ ನಡೆದಿದ್ದು, ಸಾವಿರಾರು ವರ್ಷ ಇತಿಹಾಸ ಇರುವ ಮೂಲ ಮೂರ್ತಿಯನ್ನು ಬಿಟ್ಟು ಯಾರೋ ಮಾರ್ವಾಡಿಗಳು ಕೊಡಮಾಡಿದ ಅಮೃತ ಶಿಲೆಯನ್ನು ಇಟ್ಟು ಬ್ರಹ್ಮಕಲಶ ಮಾಡಿದ್ದು, ಬಹುದೊಡ್ಡ ಅಪಚಾರವಾಗಿದೆ. ತಕ್ಷಣ ಈ ಬಗ್ಗೆ ಪುರಾ ತತ್ವ ಇಲಾಖೆ ನೀಡಿದ ಆದೇಶ ಜಾರಿ ಮಾಡಿ ಶ್ರೀ ಕಾಲಬೈರವ ದೇವರ ಮೂಲ ಮೂರ್ತಿ ಪ್ರತಿಷ್ಟಾಪನೆ ಆಗಬೇಕು ಎಂದು ಹರಿನಾಥ್ ಜೋಗಿ ಒತ್ತಾಯಿಸಿದರು.
ಕದ್ರಿ ಜೋಗಿ ಮಠ ಹಿತರಕ್ಷಣಾ ಸಮಿತಿ ಅಧ್ಯಕ್ಷಶರತ್ ಕುಮಾರ್, ಜೀರ್ಣೋದ್ದಾರ ಮತ್ತು ಕಾರ್ಯ ನಿರ್ವಹಣ ಸಮಿತಿ ಕಾರ್ಯದರ್ಶಿ ಹರೀಶ್ ಎಸ್.ಜೋಗಿ, ಸಮಾಜದ ಪ್ರಮುಖರಾದ ಕೆ. ದಯಾನಂದ ಜೋಗಿ, ಬಾಲಕೃಷ್ಣಕದ್ರಿ, ನಾಗೇಂದ್ರ ಚಿಲಿಂಬಿ, ಸತೀಶ್ ಜೋಗಿ ಮಾಲೆಮಾರ್, ವಿದ್ಯಾ ಗಣೇಶ್, ದಿವ್ಯ ನವೀನ್, ಶರತ್ ಕುಮಾರ್, ಜಗಜೀವನ್ ದಾಸ್, ಸುರೇಶ್ ಕುಮಾರ್,ನಾಗೇಶ್, ಗಣೇಶ್,ಕಾನೂನು ಸಲಹೆಗಾರರಾದ ಹರೀಶ್ ಎಸ್., ಮೋಹನ್, ಜಯಂತ್ ಜೋಗಿ, ದಯಾನಂದ ಜೋಗಿ, ಪ್ರಮಿತ್ ಜೋಗಿ ಮತ್ತಿತರ ಪದಾಧಿಕಾರಿಗಳು ಮೊದಲಾದವರಿದ್ದರು.
ಜೋಗಿ ಸಮಾಜಕ್ಕೆ ನೋವು
ಈಗಿನ ನಿರ್ಮಲನಾಥ ಸ್ವಾಮೀಜಿ ಮಠಾಧಿಪತಿಗಳು ಕಾಲಬೈರವನ ಆರಾಧಕರಾದ ಸ್ಥಳೀಯ ಜೋಗಿ ಸಮಾಜದ ಬಂಧುಗಳ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ. ರಾಜಸ್ಥಾನದ ಭಕ್ತರು ಹಾಗೂ ಕೆಲವರು ಸೇರಿಕೊಂಡು ಪುರಾತನ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಕಾಲಭೈರವ ದೇವರ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿ ಬಿಸಾಡಿದ್ದರು. ಯಾವುದೇ ವಿಧಿವಿಧಾನ ಅನುಸರಿಸದೆ ಚೀಲದಿಂದ ತೆಗೆದು ಹೊಸ ವಿಗ್ರಹ ಕೂರಿಸಿದ್ದಾರೆ. ಮಠ ಜೋಗಿ ಸಮುದಾಯಕ್ಕೆ ಸೇರಿದ್ದು, ಮಠಾಧೀಶರ ನಿರ್ದೇಶನದಲ್ಲಿ ಜೋಗಿಗಳೇ ಪ್ರತಿನಿತ್ಯ ಪೂಜೆ ನಡೆಸಬೇಕು ಎಂದರು. ಹಳೆಯ ಕಾಲಭೈರವ ದೇವರ ವಿಗ್ರಹವನ್ನು ಮಠಾಧಿಪತಿಗಳು ಮಾರಾಟಕ್ಕೆ ಯತ್ನಿಸಿದ್ದರು. ನಾವು ಪ್ರಾಚ್ಯವಸ್ತು ಇಲಾಖೆಯನ್ನು ಸಂಪರ್ಕಿಸಿ ಮಾರಾಟ ತಡೆದಿದ್ದೇವೆ. ಮೊದಲಿನ ವಿಗ್ರಹವನ್ನೇ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ಬಂದಿಲ್ಲ.ಇದರಿಂದ ಬೇಸತ್ತು ಉಪವಾಸ ಸತ್ಯಾಗ್ರಹ ಮಾಡಿದ್ದೇವೆ.ಇದು ಸಾಂಕೇತಿಕ ವಾಗಿದ್ದು ಬೇಡಿಕೆ ಈಡೇರದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುದು ಜೋಗಿ ಮಠದ ಜಿರ್ಣೋದ್ಧಾರ ಮತ್ತು ಕಾರ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಹರಿನಾಥ್ ಹೇಳಿದರು.