ಜಿಲ್ಲೆ

ಕೆಂಪುಕಲ್ಲು ಕ್ವಾರಿ ಮಾಲೀಕರ ಸತ್ಯಾಗ್ರಹ 6ನೇ ದಿನಕ್ಕೆ : ಅಧಿಕಾರಿಗಳಿಂದ ದೌರ್ಜನ್ಯ ಆರೋಪ

ಸೌಮ್ಯ ಆರ್

ಕಾಸರಗೋಡು: ಕೆಂಪುಕಲ್ಲು ಕ್ವಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ವಿವಿಧ ಬೇಡಿಕೆ ಮುಂದಿರಿಸಿ ವಿದ್ಯಾನಗರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿರಿಸಿದೆ.

ಕೆಂಪುಕಲ್ಲು ಕ್ವಾರಿ ಮಾಲೀಕರ ವಿರುದ್ಧ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಕೊನೆಗೊಳಿಸುವಂತೆ ಒತ್ತಾಯಿಸಿ ಸೋಮವಾರದಿಂದ ಕ್ವಾರಿ ಕೆಲಸ ಸ್ಥಗಿತಗೊಳಿಸಲಾಗಿದ್ದು, ಗುರುವಾರದಿಂದ ಕ್ವಾರಿ ಮಾಲಿಕರ ಸಂಘದ ಪದಾಧಿಕಾರಿಗಳಾದ ಸುಧಾಕರ ಪೂಜಾರಿ, ಮೊಯ್ದು ಕುಂಬಳೆ, ಚಂದ್ರನ್ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ವಿದ್ಯಾನಗರದಲ್ಲಿ ಇಪ್ಪತ್ತನಾಲ್ಕು ತಾಸುಗಳ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.

ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ನೇರವಾಗಿ ಜೀವನ ನಿರ್ವಹಿಸುತ್ತಿರುವ ಕೆಂಪುಕಲ್ಲು ಕ್ವಾರಿ ವಲಯಕ್ಕೆ ನ್ಯಾಯಸಮ್ಮತ ಪರವಾನಗಿ ನೀಡುವುದರ ಬದಲು, ಅಧಿಕಾರಿ ವರ್ಗ ತಮಗೆ ತೋಚಿದಂತೆ ಕಾನೂನು ಜಾರಿ ಮಾಡುವ ಮೂಲಕ ಈ ವಲಯವನ್ನು ದಮನಿಸಲು ಯತ್ನಿಸುತ್ತಿದೆ. ಕೆಂಪುಕಲ್ಲು ಕ್ವಾರಿ ಮಾಲೀಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಧರಣಿ ನಿರತರು ಆರೋಪಿಸುತ್ತಿದ್ದಾರೆ.

ಪರವಾನಗಿ ಇಲ್ಲದೆ ಕಲ್ಲು ಸಾಗಾಟ ನಡೆಸಿದಲ್ಲಿ ವಶಪಡಿಸುವ ವಾಹನಗಳಿಗೆ ತಕ್ಷಣ ದಂಡ ವಿಧಿಸಲಾಗುತ್ತದೆ. ಜತೆಗೆ ವಾಹನಗಳನ್ನು ಬಿಡುಗಡೆ ಮಾಡಲು ಕಾನೂನು ಇದ್ದರೂ ತಿಂಗಳುಗಟ್ಟಲೆ ವಾಹನಗಳನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಈ ರೀತಿಯ ವರ್ತನೆ ಕೊನೆಗಾಣಿಸುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಯಲಿರುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.