ಜಿಲ್ಲೆ

ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದ ಆಮರಣಾಂತ ಉಪವಾಸ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನ ಪೂರೈಸಿದ್ದು, ಬುಧವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಫ್ರೀಡಂ ಪಾರ್ಕ್ ಆವರಣದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಯಿಂದ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಲಿದ್ದು, ಅನಿರ್ದಿಷ್ಟಾವಧಿವರೆಗೂ ಮುಂದುವರಿಸಲಾಗುವುದು. ರಾಜ್ಯ ಗುತ್ತಿಗೆದಾರರ ಸಂಘವು ಕೂಡ ನಮ್ಮ ನಿಲುವುನ್ನು ಬೆಂಬಲಿಸಿ ಎಂದು ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಗುತ್ತಿಗೆದಾರರು ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಕೆಲ ಕಾಲ ಬಿಬಿಎಂಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರ ಸೂಚಿಸಿದ್ದರೂ, ಪಾಲಿಕೆ ಅಧಿಕಾರಿಗಳು ಬಿಲ್ ಮೊತ್ತ ಬಿಡುಗಡೆ ಮಾಡಲು ಒಪ್ಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಎಲ್ಲ ವಲಯಗಳಲ್ಲಿ ಗುತ್ತಿಗೆದಾರರೂ ತಮಗೆ ವಹಿಸಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಬಹುತೇಕ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರು ಕಾಣಸಿಗಲಿಲ್ಲ. ಕೆಲವರು ಸ್ಥಳಕ್ಕೆ ಬಂದರೂ, ಕಾಮಗಾರಿ ಸ್ಥಗಿತಗೊಂಡಿರುವ ವಿಷಯ ತಿಳಿದು ಹಿಂತಿರುಗಿದರು.

ಭೇಟಿಗೆ ಸಿಗಲಿಲ್ಲ ಆಡಳಿತಾಧಿಕಾರಿ:

ಪ್ರತಿಭಟನಾನಿರತ ಗುತ್ತಿಗೆದಾರರು ತಮ್ಮ ಬೇಡಿಕೆಗಳನ್ನು ವಿವರಿಸಲು ಪಾಲಿಕೆ ಆಡಳಿತಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸುವವರಿದ್ದರು. ಆದರೆ, ಅವರು ಸಿಗಲಿಲ್ಲ. ಮತ್ತೊಂದು ದಿನ ಭೇಟಿಗೆ ಅವಕಾಶ ಮಾಡಿಕೊಡುವುದಾಗಿ ಆಡಳಿತಾಧಿಕಾರಿ ಕಚೇರಿ ಅಧಿಕಾರಿಗಳು ಅಭಯ ನೀಡಿದ್ದಾರೆ.