ಜಿಲ್ಲೆ

ಇನ್ನು ಕರೊನಾ ಫಲಿತಾಂಶ ಶೀಘ್ರ, ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

Udupi

ಉಡುಪಿ: ರಾಜ್ಯದಲ್ಲಿ ಕರೊನಾ ಆರಂಭದಲ್ಲಿ ಕೇವಲ ಒಂದು ಪರೀಕ್ಷಾ ಲ್ಯಾಬ್ ಇತ್ತು. ಈಗ ರಾಜ್ಯದಲ್ಲಿನ ಕೋವಿಡ್ ಪರೀಕ್ಷಾ ಲ್ಯಾಬ್‌ಗಳ ಸಂಖ್ಯೆ 82ಕ್ಕೇರಿದೆ. ಜಿಲ್ಲೆಯಲ್ಲಿ ಈ ಮೊದಲು ಮಾದರಿ ಪರೀಕ್ಷೆಗೆ ಮಂಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳನ್ನು ಅವಲಂಬಿಸಬೇಕಿತ್ತು. ಈಗ ಇಲ್ಲಿಯೇ ಲ್ಯಾಬ್ ಆರಂಭಿಸಿರುವುದರಿಂದ ಶೀಘ್ರದಲ್ಲೇ ವರದಿ ಪಡೆಯಬಹುದಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಕೋವಿಡ್-19 ಸರ್ಕಾರಿ ಪರೀಕ್ಷಾ ಲ್ಯಾಬ್ ಉದ್ಘಾಟಿಸಿ, ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 1390ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬಂದಿವೆ. ಈ ಪೈಕಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆಯೇ 1100 ನ್ನು ಮೀರಿದೆ. ಹೊರ ರಾಜ್ಯ, ದೇಶಗಳಿಂದ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವವರಿಗಾಗಿ ಲ್ಯಾಬ್ ಆರಂಭಿಸಬೇಕಾದ ಅವಶ್ಯಕತೆ ಮನಗಂಡು ಜಿಲ್ಲೆಗೆ ವಿಶೇಷವಾಗಿ ಕೋವಿಡ್ ಲ್ಯಾಬ್‌ನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ ಎಂದರು.

ಆಂಬುಲೆನ್ಸ್ ಮಾನಿಟರಿಂಗ್ ಸಿಸ್ಟಂ ಯೋಜನೆಯನ್ನು ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲ್ಲ ಸರ್ಕಾರಿ ಆಂಬುಲೈನ್ಸ್ ಗಳಿಗೆ ಜಿ.ಪಿಎಸ್. ಅಳವಡಿಸಿದ್ದು, ಅವು ಯಾವ ಸ್ಥಳದಲ್ಲಿವೆ ಎಂಬ ಮಾಹಿತಿ ಬೆರಳ ತುದಿಯಲ್ಲಿಯೇ ದೊರೆಯಲಿದೆ. ಇದರಿಂದ ಕೋವಿಡ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬಕ್ಕೆ ಆಸ್ಪದವಿಲ್ಲ ಎಂದರು.

ಜಿಲ್ಲೆಯಲ್ಲಿನ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಬೆಡ್‌ಗಳ ಕುರಿತು ಮಾಹಿತಿ ನೀಡಲು ರೂಪಿಸಿರುವ ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಕೋವಿಡ್-19 ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಉಪಸ್ಥಿತರಿದ್ದರು.