ಜಿಲ್ಲೆ

ಸವಾರಿ ಹಬ್ಬದಲ್ಲಿ ಮಕ್ಕಳಿಂದ ಮೂಡಿಬಂದ ಆಕರ್ಷಣೀಯ ಚಿತ್ರಗಳು

ಹುಬ್ಬಳ್ಳಿ: ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ಹಾಗೂ ಟ್ರಿನಿಟಿ ಟೆಕ್ನಾಲಜಿಸ್ ಆಂಡ್ ಸಾಫ್ಟ್​ವೇರ್ ಸೊಲ್ಯೂಷನ್ಸ್ ಪ್ರೖೆವೇಟ್ ಲಿಮಿಟೆಡ್ ಸಹಯೋಗದಲ್ಲಿ ಇಲ್ಲಿನ ತೋಳನಕೆರೆ ಉದ್ಯಾನದಲ್ಲಿ ಸೋಮವಾರ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಗೆ (ಸವಾರಿ ಹಬ್ಬ) ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

‘ಬೈಸಿಕಲ್ ಬಳಸಿ ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡುವುದು’ ವಿಷಯ ಕುರಿತ ಚಿತ್ರಕಲೆ ಸ್ಪರ್ಧೆಯಲ್ಲಿ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಚಿತ್ರ ಬಿಡಿಸಿದರು. 5, 6 ಹಾಗೂ 7 ನೇ ತರಗತಿ ವಿಭಾಗದಲ್ಲಿ ಸಮರ್ಥ ಪತ್ತಾರ (ಪ್ರಥಮ), ಸುಹಾಸ ಚೌಗಲೆ(ದ್ವಿತೀಯ), ಪಿಯೂ ಪ್ರದೀಪ ಕಬಾಡಿ (ತೃತೀಯ) ಹಾಗೂ 8, 9 ಹಾಗೂ 10ನೇ ತರಗತಿ ವಿಭಾಗದಲ್ಲಿ ಸುಕುದಾ ಮುರಗೋಡ (ಪ್ರಥಮ), ದಿವ್ಯಾ ಉಳ್ಳಟ್ಟಿ (ದ್ವಿತೀಯ), ರುಹಾ ಬದಾಮಿ (ತೃತೀಯ) ಅವರು ನಗದು ಹಾಗೂ ಶೀಲ್ಡ್​ಗಳನ್ನು ಬಹುಮಾನವಾಗಿ ಪಡೆದರು.

ತೀರ್ಪಗಾರರಾಗಿ ಭಾಗವಹಿಸಿದ್ದ ಶಿಕ್ಷಕರಾದ ಮೋಹನ ಮಿರಾಂಡಾ, ಜಿ.ವಿ. ಕಿತ್ತೂರ, ನಾರಾಯಣ ಯರಗುಪ್ಪಿ, ಶಾಂತಯ್ಯ ತಂಬೂರ, ನಿರೂಪಕ ಆರ್​ಜೆ ರಶೀದ್ ಅವರನ್ನು ಗೌರವಿಸಲಾಯಿತು. ಸ್ಮಾರ್ಟ್​ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೀಜ್ ದೇಸಾಯಿ, ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ, ಟ್ರಿನಿಟಿ ಟೆಕ್ನಾಲಜಿಸ್​ನ ವ್ಯವಸ್ಥಾಪಕ ನಿರ್ದೇಶಕ ರಜನೀಶ ಗಂಜಾಳ, ತ್ರಿವೇಣಿ ಬೇಕರಿಗಳ ಮಾಲೀಕ ದೇವೇಂದ್ರಪ್ಪ ಸಿಂಧೋಗಿ, ಬ್ಯಾಂಕ್ ಆಫ್ ಬರೋಡ ಹುಬ್ಬಳ್ಳಿ ಕ್ಷೇತ್ರೀಯ ಪ್ರಬಂಧಕ ವಿ. ಶ್ರೀಹರಿ ಅವರು ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಸೈಕಲ್ ಸವಾರಿ ಬೆಸ್ಟ್

ಸ್ಮಾರ್ಟ್​ಸಿಟಿ ಕಂಪನಿ ಸೈಕಲ್​ಗಳನ್ನು ಜನರಿಗೆ ಪರಿಚಯಿಸಿದೆ. ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿರಬೇಕೆಂಬ ಉದ್ದೇಶ ಇದರದ್ದು. ಮಾಲಿನ್ಯ ನಿಯಂತ್ರಣಕ್ಕೆ ನಮಗಿರುವ ಒಳ್ಳೆಯ ದಾರಿ ಇದು. ಜನರಿಗೆ ನಾವು ಇನ್ನಷ್ಟು ಹತ್ತಿರವಾಗಲು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ.

-ರುದ್ರೇಶ ಗಾಳಿ, ಸ್ಮಾರ್ಟ್​ಸಿಟಿ ಕಂಪನಿ ಎಂಡಿ ಹುಬ್ಬಳ್ಳಿ