ಮಂಡ್ಯ: ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಆಶೋಕ್ ತಿಳಿಸಿದ್ದಾರೆ.
ಭತ್ತ ನೀರಾವರಿ ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ, ರಾಗಿ(ಮಳೆಯಾಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ ತಾಲೂಕಿನ ಅಧಿಸೂಚಿತ ಗ್ರಾಮ ಪಂಚಾಯಿತಿ, ಮುಸುಕಿನಜೋಳ(ಮಳೆಯಾಶ್ರಿತ) ಬೆಳೆಗೆ ಮಳವಳ್ಳಿ ತಾಲೂಕಿನ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ರೈತರು ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದಿದ್ದಾರೆ.
ಇನ್ನು ಭತ್ತ(ನೀರಾವರಿ), ರಾಗಿ(ನೀರಾವರಿ), ರಾಗಿ(ಮಳೆಯಾಶ್ರಿತ), ಮುಸುಕಿನಜೋಳ(ನೀರಾವರಿ), ತೊಗರಿ(ಮಳೆಯಾಶ್ರಿತ), ಹುರುಳಿ(ಮಳೆಯಾಶ್ರಿತ), ನೆಲಗಡಲೆ(ಮಳೆಯಾಶ್ರಿತ), ಅಲಸಂದೆ(ಮಳೆಯಾಶ್ರಿತ), ಎಳ್ಳು(ಮಳೆಯಾಶ್ರಿತ), ಟೊಮ್ಯಾಟೋ ಮತ್ತು ಎಲೆಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಒಳಪಡಿಸಲಾಗುವುದು. ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆ ಐಚ್ಛಿಕವಾಗಿದ್ದು, ಅಧಿಸೂಚಿಸಲಾದ ಬೆಳೆಗಳಿಗೆ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ / ಕಂದಾಯ ರಶೀದಿ/ ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆ ವಿವರಗಳೊಂದಿಗೆ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ,ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ವಿವರಕ್ಕೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.