ಜಿಲ್ಲೆ

ಫಸಲ್ ಬಿಮಾ ಅಕ್ರಮ ಮುಚ್ಚಿಹಾಕಲು ಯತ್ನ

ದೇವದುರ್ಗ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಾಲಹಳ್ಳಿ ಹೋಬಳಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಫಸಲ್‌ಬಿಮಾ ಯೋಜನೆಯಡಿ 2021-22ನೇ ಸಾಲಿನಲ್ಲಿ ತಾಲೂಕಿನ ರೈತರು ವಿಮೆ ತುಂಬಿದ್ದಾರೆ. ಅರ್ಹ ರೈತರಿಗೆ ಪರಿಹಾರ ನೀಡದೆ, ವಿಮೆ ಕಂಪನಿ ಹಾಗೂ ಅಧಿಕಾರಿಗಳು ಸೇರಿ ಕೆಲ ರೈತರ ಹೆಸರಿನಲ್ಲಿ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವ್ಯವಹಾರ ನಡೆದಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು ಈ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಾಲಹಳ್ಳಿ ಠಾಣೆಯಲ್ಲಿ 36 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅಧಿಕಾರಿಗಳು ತನಿಖೆ ನಡೆಸದೆ ಕಾಲಹರಣ ಮಾಡುತ್ತಿದ್ದಾರೆ. ಅವ್ಯವಹಾರ ತನಿಖೆ ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಸಲ್ ಬಿಮಾ ಯೋಜನೆಯಡಿ ನಡೆದಿರುವ ಅವ್ಯವಹಾರದ ಸಂಪೂರ್ಣ ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಮೆ ತುಂಬಿರುವ ಅರ್ಹ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌ಗೆ ಮನವಿ ಸಲ್ಲಿಸಿದರು.