ಲಕ್ಕೂರು: ಸರ್ಕಾರಿ ನೌಕರಿಯ ನಿವೃತ್ತಿಯ ನಂತರ ವಿಶ್ರಾಂತಿ ದಿನಗಳನ್ನು ವ್ಯರ್ಥವಾಗಿ ಕಳೆಯದೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವೃತ್ತಿ ಜೀವನದಲ್ಲಿ ಅಧಿಕಾರಿಯಾದರೂ ಸಹ ಕೃಷಿ ಕ್ಷೇತ್ರದಲ್ಲಿ ಮಿಶ್ರ ಬೇಸಾಯ ಪದ್ಧತಿಯ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ ಕಣಿವೇನಹಳ್ಳಿಯ
ಕೃಷಿಕ ಎಸ್.ಹನುಮಂತಪ್ಪ.
ರಾಜ್ಯದ ನಾನಾ ಕಡೆ ನಗರಸಭೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಮಾಲೂರು ತಾಲೂಕಿನ ಕಸಬಾ ಹೋಬಳಿಯ ಕಣಿವೇನಹಳ್ಳಿಯಲ್ಲಿ 8 ಎಕರೆ ಜಮೀನನ್ನು ಖರೀದಿಸಿ ಸಾವಯವ ಪದ್ಧತಿ ಮೂಲಕ ಮಿಶ್ರ ಬೇಸಾಯದಿಂದ ಹಲವು ಬೆಳೆ ಬೆಳೆದು ಆರ್ಥಿಕ ಪ್ರಗತಿ ಕಂಡುಕೊಂಡಿದ್ದಾರೆ.
ಹೋಸಕೋಟೆ ತಾಲೂಕಿನ ಯನಗುಂಟೆ ಗ್ರಾಮದ ಹನುಮಂತಪ್ಪ, 1981ರಲ್ಲಿ ಯಾದಗಿರಿಯ ಪುರಸಭೆಯಲ್ಲಿ ಗ್ರೇಡ್-1 ಅಧಿಕಾರಿಯಾಗಿ ಸೇವೆ ಆರಂಭಿಸಿ, ನಂತರ ಆಳಂದ, ಕಡೂರು, ಗೋಕಾಕ್, ಅಥಣಿ ಹಾಗೂ ಸಾಗರದಲ್ಲಿ ಮುಖ್ಯಾಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದರು. ನಂತರ ಬೀದರ್, ಚಿತ್ರದುರ್ಗ, ಚಿಂತಾಮಣಿ, ಕೋಲಾರ ಹಾಗೂ ಕೆಜಿಎಫ್ ನಗರಸಭೆಯಲ್ಲೂ ಪೌರಾಯುಕ್ತರಾಗಿ ಸೇವೆ ಸಲ್ಲಿಸಿ 2012ರಲ್ಲಿ ನಿವೃತ್ತಿಯಾದರು.
ನಂತರ ಕೃಷಿಯಲ್ಲಿ ಸರಳ ಪ್ರಯೋಗಗಳ ಮೂಲಕ ಉತ್ತಮ ಇಳುವರಿ ಪಡೆದು ಮಾದರಿ ರೈತರಾಗಿದ್ದಾರೆ. ಜಮೀನಿನಲ್ಲಿ 2 ಕೊಳವೆ ಬಾವಿ ಕೊರೆಯಿಸಿ ಸರ್ಕಾರದ ಅನುದಾನ ಪಡೆದು ಸೋಲಾರ್ ವಿದ್ಯುತ್ ಅಳವಡಿಸಿಕೊಂಡಿದ್ದಾರೆ. ಅಲ್ಲದೆ, 2 ಬೃಹತ್ ಕೃಷಿ ಹೊಂಡ ನಿರ್ಮಿಸಿ ವರ್ಷ ಪೂರ್ತಿ ಬೆಳೆ ಬೆಳೆಯುತ್ತಿದ್ದಾರೆ.
ಪ್ರಸ್ತುತ ವರ್ಷದಲ್ಲಿ 2 ಎಕರೆ ವಿಸ್ತೀರ್ಣದಲ್ಲಿ ರಾಗಿ ಬೆಳೆಯಲಾಗಿದೆ. ಜತೆಗೆ ಮಿಶ್ರ ಬೇಸಾಯ ಪದ್ಧತಿಯಲ್ಲಿ ಅವರೆಕಾಯಿ, ವಿವಿಧ ರೀತಿಯ ಸೊಪ್ಪು ಬೆಳೆಯುತ್ತಾರೆ. ಇವರ ಬೇಸಾಯ ಪದ್ಧತಿ ನೋಡಲು ಹಿರಿಯ ವಿಜ್ಞಾನಿಗಳು, ಪ್ರಗತಿಪರ ರೈತರು ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದು ವಿಶೇಷ.
ಸಾವಯವ ಕೃಷಿ ಪದ್ಧತಿಯಲ್ಲಿ 1 ಎಕರೆ ಜಮೀನಿಗೆ 1 ಲೋಡ್ ತಿಪ್ಪೆಗೊಬ್ಬರ, 2 ಮೂಟೆ ಹೊಂಗೆ ಹಿಂಡಿ, 2 ಮೂಟೆ ಬೇವಿನ ಹಿಂಡಿ, 5 ಕೆಜಿ ಜಿಂಕ್ ಸಲ್ಪೆಡ್, 1ಕೆ.ಜಿ
ಬೋರಾನ್ ನೀಡಬೇಕು ಇದರಿಂದ ಗುಣಿ ಪದ್ಧತಿಯ ಮೂಲಕ 1 ಎಕರೆಯಲ್ಲಿ ಸುಮಾರು 40 ಕ್ವಿಂಟಾಲ್ ರಾಗಿ ಪಡೆಯಬಹುದು ಎನ್ನುತ್ತಾರೆ ಹನುಮಂತಪ್ಪ.
ಉಪಕಸುಬಿನಲ್ಲೂ ಮುಂದು
ಕೃಷಿ ಜತೆಗೆ ನಾಟಿ ಕೋಳಿಗಳನ್ನು ಸಾಕಿದ್ದು. ಕುರಿ, ಮೇಕೆಗಳನ್ನು ಪೋಷಣೆ ಮಾಡುತ್ತಿದ್ದಾರೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಅವರು ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯ ಮೂಲಕ ಬೆಳೆಗಳನ್ನು ಬೆಳೆದು ಪ್ರಗತಿಪರ ರೈತರಾಗಿ ರೂಪುಗೊಂಡಿದ್ದಾರೆ.
ಏನೇನು ಬೆಳೆಯುತ್ತಾರೆ?
ಗುಣಿ ಪದ್ಧತಿಯಲ್ಲಿ ರಾಗಿ ಬಿತ್ತನೆ, ವಿವಿಧ ಜಾತಿ ಮಾವು, ನೇರಳೆ, ಅಂಜೂರ, ಹಿಪ್ಪುನೇರಳೆ, ಪನ್ನೇರಳೆ, ಚಕ್ಕೋತ, ತೆಂಗು, ದಾಳಿಂಬೆ, ಸೀಬೆ, ಸಪೋಟ ಬೆಳೆಗಳು ಅಲ್ಲದೆ, ತೋಟದ ಸುತ್ತಲೂ ಟೇಕ್, ಶ್ರೀಗಂಧ, ಹೆಬ್ಬೇವು, ಸಿಲ್ವರ್ಓಕ್ ಸೇರಿ 22 ಜಾತಿಯ ಮರಗಳನ್ನೂ ಬೆಳಸಿದ್ದಾರೆ.
ದೇಶದ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರು ವ್ಯವಸಾಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಹಾರ ಕ್ರಾಂತಿಯಾಗುವುದು ನಿಶ್ಚಿತ, ಗುಣಮಟ್ಟದ ಆಹಾರ ಪಡೆಯಬೇಕಾದರೆ ಕಷ್ಟವಾಗುತ್ತದೆ. ಪ್ರೌಢಶಾಲೆ ಹಾಗೂ ಕಾಲೇಜಿನ ವಿಷಯಗಳಲ್ಲಿ ಕೃಷಿ ವ್ಯವಸಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ತಂತ್ರಾಂಶ ಬಳಕೆ ಮಾಡಿಕೊಂಡು ವ್ಯವಸಾಯ ಮಾಡಿ ಪ್ರಗತಿಪರರಾಗಬೇಕು. - ಎಸ್.ಹನುಮಂತಪ್ಪ ರೈತ