ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಅಂಕ, ರ‌್ಯಾಂಕ್ ಹಿಂದೆ ಬಿದ್ದ ಶಾಲೆಗಳ ಮಧ್ಯೆ ಶಿಶಿಲ ಗ್ರಾಮದ ಹೇವಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು, ಪಾಲಕರು ಭಿನ್ನವಾಗಿ ಯೋಚಿಸಿ ಆಟದ ಮೈದಾನದಲ್ಲೇ ಕೃತಕ ಗದ್ದೆ ನಿರ್ಮಿಸಿ, ಅನ್ನದ ಮೂಲ ಹೇಗಿರುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಯುವಂತೆ ಮಾಡುತ್ತಿದ್ದಾರೆ. ಸತತ ನಾಲ್ಕು ವರ್ಷಗಳಿಂದ ಈ ಕಾರ್ಯ ಮುಂದುವರಿಯುತ್ತಿದೆ.
ಶಾಲೆಯಲ್ಲಿ 24 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಕ ಸಹಿತ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ತಿಂಗಳು ಶಾಲಾ ಮೈದಾನದ 50 ಮೀಟರ್ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಿ, ಮಣ್ಣು ಹದ ಮಾಡಿ, ವೈಕುಂಠಪುರ ಕಾಲನಿಯ ರಾಮಚಂದ್ರ ಅವರು ಶಾಲೆಗೆ ಎಂದು ಸಂಗ್ರಹಿಸಿ ಇಟ್ಟಿದ್ದ ಎಂಎಂ 54 ತಳಿಯ ನೇಜಿಯನ್ನು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಊರವರು, ಶಿಕ್ಷಕರು ಹಾಗೂ ಮಕ್ಕಳು ಸೇರಿ ನಾಟಿ ಮಾಡಿದ್ದಾರೆ. ಶಾಲೆಯಿಂದ ಪ್ರೇರಣೆ ಪಡೆದ ಮಕ್ಕಳು ಮನೆಯಲ್ಲಿಯೂ ಕೃತಕ ಗದ್ದೆ ನಿರ್ಮಿಸಿ ನೇಜಿ ನಾಟಿ ಮಾಡುತ್ತಿದ್ದಾರೆ.
20 ಕೆ.ಜಿ. ಅಕ್ಕಿ ಉತ್ಪಾದನೆ
ಮಕ್ಕಳು ಶಾಲೆಯ ಸನಿಹದಲ್ಲಿರುವ ಶಿವಣ್ಣ ಗೌಡ ಹೇವಾಜೆ ಅವರ ಗದ್ದೆಗೆ ತೆರಳಿ ಬೇಸಾಯದ ಕುರಿತು ಅನುಭವ ಪಡೆದುಕೊಂಡಿದ್ದರು. ಇತ್ತೀಚೆಗೆ ಶಿವಣ್ಣ ನಿಧನರಾಗಿದ್ದು, ಕಳೆದ ಮೂರು ವರ್ಷ ಅವರ ಮಾರ್ಗದರ್ಶನದಲ್ಲಿಯೇ ಗದ್ದೆ ನಿರ್ಮಾಣವಾಗಿತ್ತು. ಕಳೆದ ಎರಡು ವರ್ಷದಲ್ಲಿ 20 ಕೆ.ಜಿ. ಅಕ್ಕಿ ಪಡೆಯಲಾಗಿದ್ದು, ತೆನೆ ಹಬ್ಬ ಹಾಗೂ ಹೊಸ ಅಕ್ಕಿ ಊಟ ಮಾಡುವ ತುಳುನಾಡಿನ ಪದ್ಧತಿಯನ್ನು ಶಾಲೆಯಲ್ಲಿ ಆಚರಿಸಲಾಗುತ್ತಿದೆ.
ಈ ವರ್ಷ ನೇಜಿ ನಾಟಿ ಮಾಡುವುದಿಲ್ಲವೇ ಸರ್? ಯಾವಾಗ ಗದ್ದೆ ನಿಮಾಣ ಮಾಡುವುದು? ಎಂದು ಮಕ್ಕಳು ಕೇಳಿದಾಗ ನಾವು ಮಾಡಿದ ಪ್ರಯತ್ನ ಫಲಕಾರಿಯಾಗಿದೆ ಎಂದು ಸಂತೋಷವಾಗುತ್ತದೆ. ಈ ಕೂತೂಹಲ ಹೊಸ ಕಲಿಕೆಗೆ ಮುನ್ನುಡಿ. ಗಣೇಶ್ ಪ್ರಸಾದ್ ಧರ್ಮದಕಳ ನಿಕಟ ಪೂರ್ವಾಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ ಮಕ್ಕಳ ಕಲಿಕೆಗೆ ವಿವಿಧ ರೀತಿಯ ಚಟುವಟಿಕೆ ಮಾಡುತ್ತಿದ್ದೇವೆ. ಅನ್ನದ ಹಿಂದಿನ ರೈತರ ಪರಿಶ್ರಮ ಏನೆಂದು ಮಕ್ಕಳು ತಿಳಿದು ಕೃಷಿ ಅಭಿರುಚಿ, ಆಸಕ್ತಿ ಬೆಳೆಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶ. ನಾಗರಾಜ್, ಶಿಶಿಲ ಹೇವಾಜೆ ಸ.ಕಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ https://www.vijayavani.net/tribute-to-ishwar-malpe-team https://www.vijayavani.net/daivi-vana-management-problem