ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್ ಆಯೋಗದ ತೀರ್ಪಿನಂತೆ ಕರ್ನಾಟಕ ರಾಜ್ಯದ ಪಾಲಿನ 15 ಟಿಎಂಸಿ ನೀರು ಭೀಮಾ ನದಿಗೆ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ 100 ಕಿ.ಮೀ. ಪಾದಯಾತ್ರೆ ನಡೆಸಿ, ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಜಲಪುರ ತಾಲೂಕಿನ ಅಳ್ಳಗಿ ಬಿ ಗ್ರಾಮದಿಂದ ಆರಂಭವಾದ ಪಾದಯಾತ್ರೆಯೂ ಮೂರು ದಿನ ನಡೆದು, ನಗರ ಪ್ರವೇಶಿಸಿದ್ದು, ರೈತರ ಜತೆಗೆ ಕಲಬುರಗಿ, ವಿಜಯಪುರದ ಸಿಂದಗಿ, ಇಂಡಿ, ಆಲಮೇಲ್, ಯಾದಗಿರಿ ಸೇರಿ ವಿವಿಧೆಡೆಯ ರೈತರು, ಮುಖಂಡರು, ಸಹಸ್ರಾರು ಸಾರ್ವಜನಿಕರು, ಮಠಾಧೀಶರು ಸಾಥ್ ನೀಡಿದರು.
ಹೋರಾಟ ಸಮಿತಿ ಅಧ್ಯಕ್ಷ ರಮೇಶ ಪಾಟೀಲ್ ಮಾತನಾಡಿ, 1972ರಲ್ಲಿಯೇ ಬಚಾವತ್ ಆಯೋಗ ತೀರ್ಪು ನೀಡಿದ್ದರೂ ಮಹಾರಾಷ್ಟ್ರದವರು ಪ್ರವಾಹ ಹೊರತುಪಡಿಸಿ, ಅಗತ್ಯವಿದ್ದಾಗ ನೀರು ಬಿಡುತ್ತಿಲ್ಲ. ತೀರ್ಪಿನ ಪ್ರಕಾರ 15 ಟಿಎಂಸಿ ನೀರು ಕರ್ನಾಟಕಕ್ಕೆ ಬಿಡಬೇಕು. ತೀವ್ರ ಬರದಿಂದ ಬೆಳೆಗೆ ಮಾತ್ರವಲ್ಲ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು, ತಕ್ಷಣ ರಾಜ್ಯ ಸರ್ಕಾರ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಿ, ನೀರು ಬಿಡಿಸಬೇಕು ಎಂದು ಆಗ್ರಹಿಸಿರು.
ನ್ಯಾಯಾಧೀಕರಣ ಆಗಲಿ: ಕಾವೇರಿ ನದಿ ನೀರು ಹಂಚಿಕೆಗೆ ರಚಿಸಿದಂತೆ ಭೀಮಾ ನದಿ ನೀರು ಹಂಚಿಕೆಗೂ ನ್ಯಾಯಾಧೀಕರಣ ರಚಿಸಲು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. 15 ಟಿಎಂಸಿ ನಮ್ಮ ಪಾಲಿನ ಹಕ್ಕಿನ ನೀರಾಗಿದೆ. ನಾವು ಕೇಳುತ್ತಿರುವುದು ಭೀೆಯಲ್ಲ ನಮ್ಮ ಪಾಲಿನ ಹಕ್ಕು. ನ್ಯಾಯಾಧೀಕರಣ ರಚನೆ, ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೊರೆ, ಕೇಂದ್ರಕ್ಕೆ ಪತ್ರವ್ಯವಹಾರ ಎಲ್ಲ ಪ್ರಕ್ರಿಯೆಗಳನ್ನು ನಡೆಸಲು ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಶ್ರೀ ಕೈಲಾಸಲಿಂಗ ಶಿವಾಚಾರ್ಯರು, ಶ್ರೀ ವೀರಮಹಾಂತ ಶಿವಾಚಾರ್ಯರು, ಹೋರಾಟಗಾರರಾದ ಭೀಮರಾವ ಗೌರ, ಶ್ರೀಮಂತ ಬಿರಾದಾರ, ಮುರುಘೇಂದ್ರ ಮಸಳಿ, ಬಸವರಾಜ ಶಿರ್, ಶರಣಗೌಡ ಪಾಟೀಲ್, ಅರ್ಜುನ ಸೋಮಜಾಳ, ನಾಮದೇವ ಕಡಕೋಳ, ಬಿಎಂ ರಾವ್, ಬಸವರಾಜ ಕಲಶೆಟ್ಟಿ, ಶಿವ ಕಾಳೆ, ಸಿದ್ದಯ್ಯ ಹಿರೇಮಠ, ಗಂಗಾಧರ ಪಾಟೀಲ್ ಇತರರಿದ್ದರು.
ಕಾವೇರಿಯಷ್ಟೇ ಕಾಳಜಿ ಇರಲಿ: ಕರ್ನಾಟಕವೆಂದರೆ ಬರೀ ಕಾವೇರಿ ಎನ್ನುವಂತೆ ದಣ ಕರ್ನಾಟಕದ ರಾಜಕಾರಣಿಗಳು, ಇಡೀ ಸರ್ಕಾರ ವರ್ತಿಸುತ್ತಿದ್ದು, ಅಷ್ಟೇ ಕಾಳಜಿ ಭೀಮಾ, ಕೃಷ್ಣಾ ನದಿ ಮೇಲೂ ಇರಬೇಕು. ಭೀಮಾ ನದಿಯಿಂದ ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಯ ಲಾಂತರ ರೈತರಿಗೆ ಅನುಕೂಲವಿದ್ದು, ಸರ್ಕಾರ ಕಾವೇರಿ ಎಂದ ತಕ್ಷಣ ಕಾನೂನು, ತೋಳ್ಬಲ ಸೇರಿ ಎಲ್ಲ ರೀತಿಯ ಹೋರಾಟಕ್ಕೆ ಮುಂದಾಗುತ್ತಿದ್ದು, ಅದೇ ಮಾದರಿ ಭೀಮಾ ನದಿ ನೀರಿನ ಪಾಲಿಗೂ ಹೋರಾಡಬೇಕು. ಇಲ್ಲದಿದ್ದರೆ ಪಾದಯಾತ್ರೆ ಬೆಂಗಳೂರಿನ ವಿಧಾನಸೌಧಕ್ಕೆ ಬರುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.