ಜಿಲ್ಲೆ

ಹೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ ನಾಳೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೃಷಿ ಪಂಪ್​ಸೆಟ್​ಗಳಿಗೆ ಆಧಾರ್ ಸಂಖ್ಯೆ ಜೋಡಣೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ. 4ರಂದು ಮಧ್ಯಾಹ್ನ 12 ಗಂಟೆಗೆ ನವನಗರದಲ್ಲಿನ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕಚೇರಿ ಎದುರು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಅಧ್ಯಕ್ಷ ಈರಪ್ಪ ಕಂಕೊಳ್ಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪಂಪ್​ಸೆಟ್​ಗಳಿಗೆ ಆಧಾರ್ ಜೋಡಣೆಯ ಮೂಲಕ ಮೀಟರ್ ಅಳವಡಿಸಿ ವಿದ್ಯುತ್ ಶುಲ್ಕ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ಜಾರಿ ಮಾಡಬಾರದು. ಕೊಳವೆ ಬಾವಿಗಳಿಗೆ ಟಿ.ಸಿ., ಕಂಬ, ವೈರ್ ಇತರೆ ಉಪಕರಣಗಳನ್ನು ಹೆಸ್ಕಾಂನವರೇ ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮನೆ ಬಳಕೆ ಗ್ರಾಹಕರಿಗೆ 200 ಯೂನಿಟ್ ಉಚಿತ ವಿದ್ಯುತ್ ಜಾರಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ವಿದ್ಯುತ್ (ಯೂನಿಟ್ ದರ) ಶುಲ್ಕವನ್ನು ಹೆಚ್ಚಿಸಿದ್ದು, ಅದನ್ನು ಕಡಿಮೆ ಮಾಡಬೇಕು. ವಿದ್ಯುತ್ ಅವಘಡಗಳು ಸಂಭವಿಸಿದಾಗ ಮೃತಪಟ್ಟ ರೈತ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ನಮ್ಮ ಬೇಡಿಕೆಗಳಾಗಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಕಲ್ಮೇಶ ಲಿಗಾಡಿ, ಮಹಾದೇವಿ ಪಾಟೀಲ, ಶಿವನಗೌಡ ಶಿಂದೋಗಿ, ಕರಿಯಪ್ಪ ಅವರಾದಿ ಇದ್ದರು.