ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣಬಸಪ್ಪ ಮತ್ತು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿರಾಜಪೇಟೆ ಅರಣ್ಯ ಭವನದಲ್ಲಿ ರೈತರ ಸಭೆ ನಡೆಯಿತು. ಕಾಡ್ಯಾಮಾಡ ಮನುಸೋಮಯ್ಯ, ಗೋಪಾಲ್ ಇತರರು ಇದ್ದರು. 
ಜಿಲ್ಲೆ

ಕಾಡಾನೆಗಳ ಹಾವಳಿಗೆ ತತ್ತರಿಸಿದ ರೈತರು

ಗೋಣಿಕೊಪ್ಪ: ಕೊಡಗು ಜಿಲ್ಲೆಯ ರೈತರು ಕಾಡಾನೆ ಮತ್ತು ವನ್ಯಮೃಗಳ ಉಪಟಳದಿಂದ ತತ್ತರಿಸಿಹೊಗಿದ್ದಾರೆ, ಅರಣ್ಯ ಇಲಾಖೆಯು ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾಗಿದೆ, ಬೆಳೆ ಹಾನಿ ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಣ್ಯ ಭವನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣಬಸಪ್ಪ ಅವರ ಸಮ್ಮುಖದಲ್ಲಿ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಾಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ತಿತಿಮತಿ ಘಟಕದ ರೈತ ಮುಖಂಡ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ತಿತಿಮತಿ, ಮತ್ತಿಗೋಡು, ಜಂಗಲಾಡಿಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಆನೆ ಸಫಾರಿ ಮತ್ತು ಕಾಡಾನೆಗಳ ವೀಕ್ಷಣಾ ನಿಲಯ ವ್ಯೆ ಪಾಯಿಂಟ್ ಸಮೀಪದ ಕಾಫಿ ತೋಟಗಳಿಗೆ ಮಾರಕವಾಗಿದೆ. ಕಾಡಾನೆಗಳನ್ನು ಪಳಗಿಸುವ ನೆಪದಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಸಿದ್ಧಪಡಿಸುವುದಾಗಿದೆ. ಕಾಡಾನೆಗಳು ಸೇರಿದಂತೆ ಪಳಗಿದ ಆನೆಗಳು ಸಲೀಸಾಗಿ ತೋಟಗಳಿಗೆ ಲಗ್ಗೆ ಹಾಕಲಿವೆ. ಇದರಿಂದ ತೋಟದ ಮಾಲೀಕರು, ರೈತರು ಸಮಸ್ಯೆಗಳನ್ನು ಎದುರಿಸಲಿದ್ದಾರೆ ಎಂದು ದೂರಿದರು.

ನಾಗರಹೊಳೆ ಸಮೀಪದ ನಾಣಚ್ಚಿ ಗ್ರಾಮದ ನಿವಾಸಿ ಅಕ್ಷಯ್ ಮಾತನಾಡಿ, ಕಾಫಿತೋಟದಲ್ಲಿ ಬೇಟೆಗಾರರ ಉಪಟಳ ಹೆಚ್ಚಾಗಿದೆ. ತೋಟದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದ್ದು, ಬೇಟೆಗಾರರ ಫೋಟೋಗಳನ್ನು ಪೊಲೀಸ್ ಠಾಣೆಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಂರಕ್ಷಣಾಧಿಕಾರಿ, ಈ ಬಗ್ಗೆ ಸೂಕ್ತ ವರದಿ ನೀಡುವಂತೆ ಸಹಾಯಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೇಮಾಡ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದೊಂದಿಗೆ ಇದೀಗ ಹುಲಿ, ಮಂಗ ಮತ್ತು ಕಾಡುಹಂದಿಗಳ ಕಾಟವೂ ಮಿತಿಮೀರಿದೆ. ಕಾಡಾನೆಗಳ ಚಲನವಲನಗಳನ್ನು ಗ್ರಹಿಸಲು ಕಾಲರ್ ಐಡಿ ಅಳವಡಿಸಲಾಗಿದೆ. ಆದರೆ ಹುಲಿ, ಕಾಡುಹಂದಿಗಳ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ಜರುಗಿಸಿದ್ದೀರಾ ಎಂದು ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸದೆ ಮೌನವಾದರು.

ಮತ್ತಿಗೋಡು ಅರಣ್ಯ ಅಂಚಿನಲ್ಲಿ ಅಳವಡಿಸಲು ರೈಲ್ವೆ ಬ್ಯಾರಿಕೇಡ್ ತಂದು ಸುಮಾರು 6 ವರ್ಷಗಳೇ ಕಳೆದಿವೆ. ಆದರೆ ಇಂದಿನವರೆಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸದೆ ತುಕ್ಕುಹಿಡಿಯುತ್ತಿವೆ. ಇಲಾಖೆಯ ನಿರ್ಲಕ್ಷೃದಿಂದ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ತಿತಿಮತಿ ಭಾಗದ ರೈತರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಎಸಿಎಫ್, ಈ ಭಾಗದಲ್ಲಿ ಸುಮಾರು 3 ಕಿಮೀ ಅಂತರ ಮಾತ್ರ ಬ್ಯಾರಿಕ್ಯಾಡ್ ಅಳವಡಿಸಲು ಬಾಕಿ ಉಳಿದುಕೊಂಡಿದೆ. ಗುತ್ತಿಗೆ ಪಡೆದವರು ಕೆಲಸ ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿದರು.

ರೈತ ಸಂಘ ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ಇಲಾಖೆಯ ಅಧಿಕಾರಿಗಳು ರೈತ ಸಂಘದ ಪದಾಧಿಕಾರಿಗಳ ವಿರುದ್ಧೆ ಸುಳ್ಳು ಆರೋಪಿ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ತನಿಖೆಗೆ ಮುಂದಾಗಬೇಕು. ಅಲ್ಲದೆ ರೈತ ಸಂಘದ ಸದಸ್ಯರ ಮೇಲೆ ಹೊರಿಸಿರುವ ಪ್ರಕರಣವನ್ನು ಶೀಘ್ರವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕು, ನಷ್ಟಗೊಂಡ ರೈತರಿಗೆ ವಿಳಂಬ ಮಾಡದೇ ಪರಿಹಾರ ನೀಡಬೇಕು ಎಂದು ಪ್ರಮುಖರು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೇಟ್ರುಮಾಡ ಸುಜೈ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚೆಂಗಪ್ಪ, ಕೋಶಾಧಿಕಾರಿ ಇಟ್ಟೀರ ಸಬಿತಾ ಭೀಮಯ್ಯ, ವಕೀಲ ಕೆ.ಬಿ. ಹೇಮಚಂದ್ರ, ಬೋಪಣ್ಣ, ವಿರಾಜಪೇಟೆ ತಾಲೂಕು ಅಧ್ಯಕ್ಷ ಭವಿಕುಮಾರ್, ಪ್ರವೀಣ್ ಬೋಪಯ್ಯ, ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಕಂಬಾ ಕಾರ್ಯಪ್ಪ, ಎಸಿಎಫ್ ಶಂಕರಪ್ಪ ಇತರರು ಇದ್ದರು.

ಜಿಲ್ಲೆಯಲ್ಲಿ ಕಾಡಾನೆ, ವನ್ಯಮೃಗಗಳಿಂದ ಜಾನುವಾರುಗಳ ಜೀವ ಹಾನಿ ಸಂಭವಿಸುತ್ತಿದೆ. ಅರಣ್ಯ ಇಲಾಖೆಯು ಅಧಿಕಾರಿಗಳು ಸಮಸ್ಯೆಗಳನ್ನು ಅರಿತು ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುವ ರೈತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕು. ರೈತರ ಅರ್ಜಿಗಳನ್ನು ವಿಳಂಬ ಮಾಡದೆ ವಿಲೇವಾರಿ ಮಾಡಬೇಕು.
ಕಾಡ್ಯಾಮಾಡ ಮನು ಸೋಮಯ್ಯ, ಜಿಲ್ಲಾಧ್ಯಕ್ಷ, ರೈತ ಸಂಘ