ಹಾಸನ: ಮೈಸೂರು ರಾಜರ ಕಾಲದಲ್ಲಿ ಬೇಲೂರು ತಾಲೂಕು ಹಳೇಬೀಡು, ಹಾಸನ ತಾಲೂಕಿನ ಸಾಲಗಾಮೆಯ ಐದಳ್ಳ ಕಾವಲು, ಅರಸೀಕೆರೆ ತಾಲೂಕಿನ ನಾಯಕನಕೆರೆ ಕಾವಲು ಮತ್ತು ಚಿಕ್ಕಲಿಂಗನಹಳ್ಳಿ ವ್ಯಾಪ್ತಿಯಲ್ಲಿ ಭೂಮಿ ಪಡೆದ ಸಾವಿರಾರು ರೈತರು ಈಗ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದು ಮಾಜಿ ಸಚಿವ ಬಿ.ಶಿವರಾಂ ತಿಳಿಸಿದರು.
ಸುಮಾರು 11,584 ಎಕರೆ ಭೂಮಿ ಮಂಜೂರಾಗಿದೆ. ಬಹುತೇಕ ರೈತರಿಗೆ ಈ ಭೂಮಿಯೇ ಜೀವನಾಧಾರವಾಗಿದೆ. ಮತ್ತೆ ಕೆಲವರು ಇದೇ ಭೂಮಿಯ ಪಹಣಿ ಇತ್ಯಾದಿ ದಾಖಲೆ ಹಾಜರುಪಡಿಸಿ ಪಿಎಲ್‌ಡಿ ಬ್ಯಾಂಕ್ ಮೊದಲಾದ ಕಡೆ ಕೋಟ್ಯಂತರ ರೂ. ಸಾಲ ಪಡೆದಿದ್ದಾರೆ. ಸರ್ಕಾರವೇ ಸಾಲ ಮಂಜೂರಾತಿ ಮಾಡಿದೆ. ಈಗ ಆ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಮೀನಿನ ದಾಖಲೆ ಪಡೆದು ಅನೇಕ ನಿಗಮಗಳೂ ಸಾಲ ಮಂಜೂರು ಮಾಡಿವೆ. ಆದರೀಗ ಕಂದಾಯ ಇಲಾಖೆಯವರು ಐದಳ್ಳ ಕಾವಲ್ ಗ್ರಾಮದ ಅರಣ್ಯ ಜಮೀನನ್ನು ಪಹಣಿಯಲ್ಲಿ ಅರಣ್ಯ ಇಲಾಖೆ ಹೆಸರಿಗೆ ಇಂಡೀಕರಣ ಮಾಡುವಂತೆ ಪತ್ರ ಬರೆದಿದ್ದಾರೆ. ಇದೀಗ ರಕ್ಷಿತಾರಣ್ಯದ ಹೆಸರಿನಲ್ಲಿ ಇಂಡೀಕರಣವೂ ಆಗಿ ಮ್ಯುಟೇಷನ್ ಬಂದಿದೆ. ಈಗ ಜಮೀನು ಮಾಲೀಕರು ಅಂದರೆ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು. ಸಾವಿರಾರು ರೈತರನ್ನು ಬೀದಿಪಾಲು ಮಾಡಲು ಹೊರಟರೆ ಅವರು ಏನಾಗಬೇಕು, ಈಗ ಅನಧಿಕೃತ ಮಂಜೂರಾತಿ ಹೇಗಾಗಲಿದೆ ಎಂದು ಕೇಳಿದ ಶಿವರಾಂ, ಸ್ವಾಧೀನದಲ್ಲಿರುವ ಭೂಮಿಯನ್ನು ಕಂದಾಯ-ಅರಣ್ಯ ಇಲಾಖೆಗಳು ಕಬಳಿಸಲು ಹುನ್ನಾರ ಮಾಡಿವೆ ಎಂದು ಆರೋಪಿಸಿದರು.
ಈಗ ಅರಣ್ಯ ಉಳಿಸಿ, ಪರಿಸರ ಕಾಪಾಡಬೇಕು ಎಂದರೆ ರೈತರು ಏನು ಮಾಡಬೇಕು, ಈಗಾಗಲೇ ಡಿಸಿ, ಸಚಿವರ ಜತೆ ಮಾತಾಡಿ ದ್ದೇನೆ. ಆದರೂ ಸರ್ಕಾರ ಸುಮ್ಮನೆ ಕುಳಿತಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈ ಗೊಂದಲದಿಂದಾಗಿ ಎತ್ತಿನ ಹೊಳೆ ಯೋಜನೆಯೂ ನಿಂತಿದೆ. ಇದನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು. ಕೆಲವರ ಪಹಣಿ ರದ್ದು ಮಾಡುವುದೂ ಸರಿಯಲ್ಲ ಎಂದರು.